ಜಿಲ್ಲಾ ರೈತ ಸಂಘದ ಸಹಯೋಗದಲ್ಲಿ ಪಡವಗೋಡು ಗ್ರಾಮದ ರಸ್ತೆ ದುರಸ್ತಿ ಕಾಮಗಾರಿ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ರಮೇಶ್ ಕೆಳದಿ , ಮಂಜುನಾಥ ಗೌಡ, ಮೇಘರಾಜ, ಶಶಿಕಲಾ ಇತರರಿದ್ದರು. 
ಶಿವಮೊಗ್ಗ

ಗ್ರಾಮದ ರೈತರಿಂದಲೇ ರಸ್ತೆ ದುರಸ್ತಿ | farmer association

ಸಾಗರ: ಪಡವಗೋಡು ಗ್ರಾಮದ ರಸ್ತೆ ದುರಸ್ತಿಗೆ ತಾಲೂಕು ಆಡಳಿತ ಸ್ಪಂದಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ರೈತ ಸಂಘದ ಸಹಯೋಗದಲ್ಲಿ ರಸ್ತೆ ದುರಸ್ತಿ ಮಾಡಿದ್ದಾರೆ.
ಗ್ರಾಮದ ರಸ್ತೆ ಸಂಪೂರ್ಣ ಹಾಳಾಗಿ ಒಂದೂವರೆ ವರ್ಷ ಆಗಿದೆ. ಗ್ರಾಮ ಪಂಚಾಯಿತಿ, ತಾಪಂ, ಶಾಸಕರಿಗೆ ರಸ್ತೆ ಅಭಿವೃದ್ಧಿ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸದ ಬಗ್ಗೆ ಗ್ರಾಮಸ್ಥರು ರೈತ ಸಂಘಕ್ಕೆ ವಿಷಯ ತಿಳಿಸಿದ್ದರು. ಶುಕ್ರವಾರ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಜೆಸಿಬಿ, ಟಿಪ್ಪರ್ ಬಳಸುವ ಜತೆಗೆ ತಾವೂ ಕೈಜೋಡಿಸಿ ಸುಮಾರು ಎರಡು ಕಿ.ಮೀ. ರಸ್ತೆ ತಾತ್ಕಾಲಿಕ ದುರಸ್ತಿ ಮಾಡಿಕೊಂಡಿದ್ದಾರೆ.
ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ಗ್ರಾಮಗಳಿಗೆ ಮೂಲ ಸೌಲಭ್ಯ ಕಲ್ಪಿಸದಿದ್ದರೆ ಕಂದಾಯ ವಸೂಲಿಗೆ ಬರುವ ಗ್ರಾಪಂ ನೌಕರರಿಗೆ ಕಂದಾಯ ಪಾವತಿಸದೆ ವಿರೋಧಿಸುವ ದಿನಗಳು ಬರಲಿವೆ. ಹಳ್ಳಿಗಳು ಅಭಿವೃದ್ಧಿ ಆಗದಿದ್ದರೆ ದೇಶ ಅಭಿವೃದ್ಧಿ ಹೊಂದುವುದಿಲ್ಲ. ಗ್ರಾಮೀಣ ಭಾಗಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಪಡವಗೋಡು ಗ್ರಾಮದಲ್ಲಿ ಎರಡು ರಸ್ತೆಗಳು ಸಂಪೂರ್ಣ ಹಾಳಾಗಿತ್ತು. ಮನವಿ ಸಲ್ಲಿಸಿದರೂ ಸ್ಪಂದಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಹಾಗಾಗಿ ಸ್ವಂತ ಹಣ ಹಾಕಿ ರೈತ ಸಂಘದ ನೇತೃತ್ವದಲ್ಲಿ ರಸ್ತೆ ಅಭಿವೃದ್ಧಿಯನ್ನು ಪ್ರತಿಭಟನೆ ರೂಪದಲ್ಲಿ ನಿರ್ವಹಿಸಿದೆ ಎಂದರು
ರೈತ ಸಂಘದ ಕಾರ್ಯಾಧ್ಯಕ್ಷ ರಮೇಶ್ ಇ. ಕೆಳದಿ ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ಎಲ್ಲ ಪಕ್ಷಗಳೂ ಆಡಳಿತ ನಡೆಸಿವೆ. ಸ್ಥಳೀಯ ಸಂಸ್ಥೆಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಚುನಾವಣೆ ನಡೆದಿಲ್ಲ. ಚುನಾವಣೆ ನಡೆಯದೇ ಇರುವುದರಿಂದ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರದಿಂದ ಯಾವುದೇ ಅನುದಾನ ಬರುತ್ತಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದಿವೆ ಎಂದು ದೂರಿದರು.
ಗ್ರಾಮಸ್ಥರಾದ ಮಂಜುನಾಥ ಗೌಡ, ಮೇಘರಾಜ್, ಅಜ್ಜಪ್ಪ, ಸಂತೋಷ್, ಲಿಂಗರಾಜ್, ಮಹೇಶ್, ಉಮೇಶ್, ನವೀನ್, ರಾಮಚಂದ್ರ, ಶಶಿಕಲಾ, ಸುಜಾತಾ ಇತರರಿದ್ದರು.
"

ಗ್ರಾಮೀಣ ಪ್ರದೇಶಕ್ಕೆ ಮೂಲ ಸೌಲಭ್ಯಗಳಾದ ರಸ್ತೆ, ವಿದ್ಯುತ್, ಚರಂಡಿ, ನೀರು, ಬೀದಿದೀಪವನ್ನು ಸರ್ಕಾರ ಕಡ್ಡಾಯವಾಗಿ ನೀಡಬೇಕು. ಈ ಸೌಲಭ್ಯ ಸಿಗದಿದ್ದಾಗ ಗ್ರಾಮಸ್ಥರು ಹತಾಶರಾಗುತ್ತಾರೆ. ಪಡವಗೋಡು ಗ್ರಾಮದ ಸಣ್ಣ ಸಮಸ್ಯೆಗೆ ಆಳುವ ಸರ್ಕಾರ ಸ್ಪಂದಿಸದಿರುವುದು ಬೇಸರ ತರಿಸಿದೆ. ಗ್ರಾಮದ ಜನರೇ ರಸ್ತೆ ಅಭಿವೃದ್ಧಿ ಮಾಡಿಕೊಂಡಿರುವುದು ಸರ್ಕಾರವೇ ತಲೆತಗ್ಗಿಸುವ ಸಂಗತಿ. ಗ್ರಾಮೀಣಾಭಿವೃದ್ಧಿ ಸಚಿವರು ತಕ್ಷಣ ಗ್ರಾಮೀಣ ಪ್ರದೇಶಗಳ ರಸ್ತೆಗಳ ಕಡೆಗೆ ಗಮನ ಹರಿಸಬೇಕು.

— ದಿನೇಶ್ ಶಿರವಾಳ, ರೈತ ಸಂಘದ ಜಿಲ್ಲಾಧ್ಯಕ್ಷ

ಪಡವಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ನಿಂತ ನೀರಾಗಿದೆ. ಗ್ರಾಮಸ್ಥರು ಸ್ಮಶಾನಕ್ಕೆ ಶವ ಸಾಗಿಸಲೂ ಸಹ ಸಾಧ್ಯವಾಗದ ಸ್ಥಿತಿಯಲ್ಲಿದ್ದರು. ಇದನ್ನು ಮನಗಂಡು ಗ್ರಾಮಸ್ಥರ ಮನವಿ ಮೇರೆಗೆ ರೈತ ಸಂಘ ಕೈಜೋಡಿಸಿ ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ರಸ್ತೆ ನಿರ್ಮಿಸಿದ್ದಾರೆ. ತಾಲೂಕಿನ ಅನೇಕ ಗ್ರಾಮಗಳಲ್ಲಿ ಇದೇ ಸ್ಥಿತಿ ಇದೆ. ರೈತ ಸಂಘ ಪ್ರತಿಭಟನಾ ರೂಪದಲ್ಲಿ ರಸ್ತೆಗಳನ್ನು ನಿರ್ಮಿಸಿ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಲಿದೆ.

— ರಮೇಶ್ ಇ. ಕೆಳದಿ, ರೈತ ಸಂಘದ ಕಾರ್ಯಾಧ್ಯಕ್ಷ