ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಅಧಿಕಾರಿಗಳ ಸಭೆ ನಡೆಸಿದರು. ಮೌನೇಶ್ ಬಡಿಗೇರ್, ಎಚ್.ಕೆ.ನಾಗಪ್ಪ ಇತರರಿದ್ದರು.
ಸಾಗರ: ಮಳೆಗಾಲ ಸಮೀಪಿಸಿರುವುದರಿಂದ ಅನೇಕ ಸಮಸ್ಯೆಗಳು ಎದುರಾಗಲಿದ್ದು, ಅಧಿಕಾರಿಗಳು, ಸಿಬ್ಬಂದಿ ರಜೆ ಹಾಕದೆ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸೂಚಿಸಿದರು.
ಸಾಗರದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸ್ಥಳೀಯ ಸಂಸ್ಥೆಗಳಿಗೆ ತಕ್ಷಣ ಪರಿಹಾರ ಒದಗಿಸಬೇಕು. ಮೆಸ್ಕಾಂ ಸಿಬ್ಬಂದಿ ಜನರ ಕರೆಗಳನ್ನು ಸ್ವೀಕರಿಸಿ ತುರ್ತು ಸಂದರ್ಭಗಳಲ್ಲಿ ನೆರವಾಗಬೇಕು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ವಿಧಾನಸಭಾ ಕ್ಷೇತ್ರವ್ಯಾಪ್ತಿ ಅಕಾಲಿಕ ಮಳೆಯಿಂದ 300ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಕಾರ್ಗಲ್-ಜೋಗ ಭಾಗದಲ್ಲಿ 50ಕ್ಕೂ ಹೆಚ್ಚು ಕಂಬಗಳು ಮುರಿದು ವಿದ್ಯುತ್ ಸಮಸ್ಯೆ ಉಂಟಾಗಿದೆ. ಸಾಗರ ತಾಲೂಕಿನಲ್ಲಿ 30ಕ್ಕೂ ಹೆಚ್ಚು ಮನೆ ಬಿದ್ದಿದ್ದು, 5 ಕೊಟ್ಟಿಗೆ ಹಾನಿಯಾಗಿದೆ. ಒಂದು ಜಾನುವಾರು ಸಿಡಿಲು ಬಡಿದು ಮೃತಪಟ್ಟಿದೆ. ಹಾನಿ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ ಎಂದರು.
ಪಟ್ಟಣದಲ್ಲಿ ಮೂರ‌್ನಾಲ್ಕು ದಿನದಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಶರಾವತಿ ಹಿನ್ನೀರಿನಿಂದ ನೀರು ಪೂರೈಸುವ ಜಾಕ್‌ವೆಲ್‌ನಲ್ಲಿ ಸಮಸ್ಯೆ ಉಂಟಾಗಿದ್ದರಿಂದ ವ್ಯತ್ಯಯ ಉಂಟಾಗಿದೆ. ರಿಪೇರಿ ಮಾಡುತ್ತಿದ್ದು, ಪ್ರಸ್ತುತ ದಿನ ಬಿಟ್ಟು ದಿನ ನೀರು ಕೊಡಲಾಗುತ್ತಿದೆ. ಈಗಾಗಲೇ ಪಟ್ಟಣ ವ್ಯಾಪ್ತಿಯಲ್ಲಿ ನೀರಿನ ಕೊರತೆ ಇರುವಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.
ತಾಪಂ ಇಒ ಮೌನೇಶ್ ಬಡಿಗೇರ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಮಹ್ಮದ್ ಹನೀಫ್, ಶ್ರೀನಿವಾಸಮೂರ್ತಿ ಇತರರಿದ್ದರು.