ಸಾಗರದ ಮಹಾಗಣಪತಿ ದೇವಸ್ಥಾನದ ಮಹಾದ್ವಾರ, ಮುಖಮಂಟಪ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು. ಟಿ.ವಿ.ಪಾಂಡುರಂಗ, ವಿರೇಶ್‌ಕುಮಾರ್, ರಶ್ಮಿ, ಎಚ್.ಕೆ.ನಾಗಪ್ಪ, ಪ್ರಮಿಳಾಕುಮಾರಿ ಇತರರಿದ್ದರು. 
ಶಿವಮೊಗ್ಗ

ಗಣಪತಿ ಮಂದಿರ ಅಭಿವೃದ್ಧಿಗೆ ಸಂಕಲ್ಪ| Ganapati temple

ಸಾಗರ: ಪ್ರಸಿದ್ಧ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಹಾಗೆಯೇ ಸಾಗರದ ಗಣಪತಿ ಮತ್ತು ಮಾರಿಕಾಂಬೆ ದೇವಸ್ಥಾನಗಳು ಎರಡು ಕಣ್ಣುಗಳು ಇದ್ದಂತೆ. ಎರಡೂ ಮಂದಿರಗಳ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಧಾರ್ಮಿಕ ದತ್ತಿ ಇಲಾಖೆಯಿಂದ ಭಾನುವಾರ ಮಹಾಗಣಪತಿ ದೇವಸ್ಥಾನದ ಮಹಾದ್ವಾರ ಮತ್ತು ಮುಖಮಂಟಪ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಮೊದಲ ಹಂತದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಗಣಪತಿ ದೇವಸ್ಥಾನದ ಮಹಾದ್ವಾರ ಮತ್ತು ಮುಖಮಂಟಪ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿದೆ. ಉದ್ಯಾನ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 15 ಲಕ್ಷ ರೂ. ಇದೆ. ಒಟ್ಟಾರೆ ಮೊದಲ ಹಂತದಲ್ಲಿ 65 ಲಕ್ಷ ರೂ. ವೆಚ್ಚದಲ್ಲಿ ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಲು ಸೂಚಿಸಿದ್ದೇನೆ ಎಂದರು.
ಸಾಗರಕ್ಕೆ ಬರುವ ಪ್ರವಾಸಿಗರು ಗಣಪತಿ ದೇವಸ್ಥಾನಕ್ಕೂ ಭೇಟಿ ನೀಡುತ್ತಾರೆ. ಅಭಿವೃದ್ಧಿಗೆ ಹಣದ ಕೊರತೆ ಇಲ್ಲ. ಸಾರ್ವಜನಿಕರೂ ದೇಣಿಗೆ ಕೊಡಲು ಸಿದ್ಧರಿದ್ದಾರೆ. ನಗರಸಭೆ ಸೇರಿ ಸ್ಥಳೀಯ ಸಂಸ್ಥೆಗಳಿಂದ ಹಣ ಕೊಡಿಸಲಾಗುತ್ತದೆ. ಗಣಪತಿ ದೇವಸ್ಥಾನ ಎದುರಿನ ಪುರಾತನ ಕೆರೆಕೋಡಿ ಆಂಜನೇಯ ಸ್ವಾಮಿ ದೇಗುಲವನ್ನೂ ಅಭಿವೃದ್ಧಿಪಡಿಸುತ್ತೇವೆ. ಕೆಳದಿ ಅರಸರ ಕಾಲದಲ್ಲಿ ನಿರ್ಮಾಣವಾದ ಮಂದಿರದ ಸಂಪೂರ್ಣ ಅಭಿವೃದ್ಧಿಗೆ ನೀಲಿ ನಕ್ಷೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ.ವಿ.ಪಾಂಡುರಂಗ ಮಾತನಾಡಿ, ಇತಿಹಾಸ ಪ್ರಸಿದ್ಧ ಮಹಾಗಣಪತಿ ದೇವಸ್ಥಾನದ ಅಭಿವೃದ್ಧಿಗೆ ಶಾಸಕರು ಸಂಕಲ್ಪ ತೊಟ್ಟು ಕೆಲಸ ಮಾಡುತ್ತಿದ್ದಾರೆ. ಅಭಿವೃದ್ದಿಗೆ ಸುಮಾರು 4 ಕೋಟಿ ರೂ. ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ದೇವಸ್ಥಾನಕ್ಕೆ ನೆರವು ನೀಡುವವರು ದೇವಸ್ಥಾನ ಸಮಿತಿಯನ್ನು ಬಂದು ಭೇಟಿ ಮಾಡಬಹುದು ಎಂದರು.
ಸಾಗರ ಉಪವಿಭಾಗಾಧಿಕಾರಿ ವಿರೇಶ್‌ಕುಮಾರ್, ತಹಸೀಲ್ದಾರ್ ರಶ್ಮಿ, ಪೌರಾಯುಕ್ತ ಎಚ್.ಕೆ.ನಾಗಪ್ಪ, ಕಾರ್ಯನಿರ್ವಹಣಾಧಿಕಾರಿ ಪ್ರಮಿಳಾಕುಮಾರಿ, ಪ್ರಮುಖರಾದ ಐ.ವಿ.ಹೆಗಡೆ, ಮಧುಮಾಲತಿ, ಗಣಪತಿ ಮಂಡಗಳಲೆ, ಕುಸುಮಾ ಸುಬ್ಬಣ್ಣ, ಯು.ಜಿ.ಶ್ರೀಧರ್, ಕೆ.ವಿ.ಜಯರಾಮ್, ಡಿ.ದಿನೇಶ್, ಲಕ್ಷ್ಮಣ್ ಜೋಯಿಸ್, ಕೃಷ್ಣಮೂರ್ತಿ ಇತರರಿದ್ದರು.