ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನನ್ನು ರಕ್ಷಣೆ ಮಾಡಿದ ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸರು.
- ಪ್ರೇಮ ವೈಫಲ್ಯದಿಂದ ರೈಲ್ವೆ ಹಳಿ ಮೇಲೆ ಮಲಗಿದ್ದ ಯುವಕ
- ರಕ್ಷಣೆ ಮಾಡಿ ಬುದ್ಧಿವಾದ ಹೇಳಿದ ನ್ಯೂಟೌನ್ ಠಾಣೆ ಪೊಲೀಸರು
- ರಾತ್ರಿ ಗಸ್ತಿನಲ್ಲಿದ್ದ ಮುಖ್ಯ ಪೇದೆ ನಾಗರಾಜ್, ಸಲೀಂ ರಕ್ಷಣೆ
ಶಿವಮೊಗ್ಗ: ಪ್ರೇಮ ವೈಫಲ್ಯ(Love failure)ದಿಂದ ರೈಲ್ವೆ ಹಳಿ ಮೇಲೆ ಮಲಗಿ ಆತ್ಮಹತ್ಯೆ(Suicide)ಗೆ ಯತ್ನಿಸಿದ್ದ ಯುವಕನನ್ನು ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸರು ರಕ್ಷಣೆ ಮಾಡಿ ಬುದ್ಧಿವಾದ ಹೇಳಿ ಪಾಲಕರೊಂದಿಗೆ ಕಳುಹಿಸಿದ್ದಾರೆ.
18 ವರ್ಷದ ಯುವಕ ಆತ್ಮಹತ್ಯೆಗೆ ಯತ್ನಿಸಿದವ. ಈತ ಭಾನುವಾರ ರಾತ್ರಿ ಭದ್ರಾವತಿ ಹುತ್ತ ಕಾಲನಿ(Hutta colony) ಸಮೀಪ ರೈಲ್ವೆ ಹಳಿ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ್ದ. ಇದನ್ನು ಗಮನಿಸಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ರಾತ್ರಿ ಗಸ್ತಿನಲ್ಲಿದ್ದ ನ್ಯೂಟೌನ್(newtown) ಠಾಣೆ ಮುಖ್ಯ ಪೇದೆ ನಾಗರಾಜ್ ಮತ್ತು ಸಲೀಂ ತಕ್ಷಣ ಸ್ಥಳಕ್ಕೆ ತೆರಳಿ ಸಾರ್ವಜನಿಕರ ಸಹಾಯದಿಂದ ಯುವಕನನ್ನು ರಕ್ಷಿಸಿದ್ದಾರೆ. ಪ್ರೇಮವೈಫಲ್ಯದಿಂದ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾನೆ. ಪಾಲಕರನ್ನು ಠಾಣೆಗೆ ಕರೆಯಿಸಿದ ಪೊಲೀಸರು ಯುವಕನನ್ನು ಅವರೊಂದಿಗೆ ಕಳುಹಿಸಿದ್ದಾರೆ.