ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಸಲ್ಲಿಸಿದ ಬಿ.ವೈ.ರಾಘವೇಂದ್ರ, ಪ್ರಸನ್ನ ಕೆರೆಕೈ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಸಾಗರದಲ್ಲಿ ಅಡಿಕೆ ಮತ್ತು ಸಾಂಬಾರು ಅಭಿವೃದ್ಧಿ ನಿರ್ದೇಶನಾಲಯದ ಉಪಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. 
ಶಿವಮೊಗ್ಗ

ನಿರ್ದೇಶನಾಲಯ ಉಪಕೇಂದ್ರ ಸ್ಥಾಪನೆಗೆ ಮನವಿ I directorate sub center

ಪ್ರಮುಖ ಮುಖ್ಯಾಂಶಗಳು

  • ಮೆಕ್ಕೆಜೋಳ ಬೆಳೆಗಾರರ ಹಿತ ಕಾಯುವಂತೆ ಒತ್ತಾಯ
  • ಅಡಿಕೆ ಬೆಳೆಗಾರರ ಸಂರಕ್ಷಣೆಗೆ ಆಗ್ರಹ
  • ಬಿವೈಆರ್ ನೇತೃತ್ವದ ನಿಯೋಗದಿಂದ ಕೃಷಿ ಸಚಿವರ ಭೇಟಿ
ಶಿವಮೊಗ್ಗ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ (raghavendra) ನೇತೃತ್ವದ ನಿಯೋಗ ನವದೆಹಲಿಯಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾಗಿ ಅಡಿಕೆ, ಸಾಂಬಾರು ಪದಾರ್ಥಗಳು ಮತ್ತು ಮೆಕ್ಕೆಜೋಳ ಬೆಳೆಗಾರರ ಅನುಕೂಲಕ್ಕಾಗಿ ಸಾಗರದಲ್ಲಿ ಅಡಿಕೆ ಮತ್ತು ಸಾಂಬಾರು ಅಭಿವೃದ್ಧಿ ನಿರ್ದೇಶನಾಲಯದ (directorate) ಉಪಕೇಂದ್ರವನ್ನು (sub center) ಸ್ಥಾಪಿಸಬೇಕೆಂದು ಮನವಿ ಮಾಡಿತು.
ಅಡಿಕೆಗೆ ಎದುರಾಗಿರುವ ಕೊಳೆರೋಗ, ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ ಹಾಗೂ ವನ್ಯಜೀವಿಗಳ ಹಾವಳಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಸಾಗರದಲ್ಲಿ ಈ ಉಪಕೇಂದ್ರ ಸ್ಥಾಪನೆಯಾದರೆ ಶಿವಮೊಗ್ಗ ಮಾತ್ರವಲ್ಲದೆ ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾವೇರಿ ಜಿಲ್ಲೆಗಳ ರೈತರಿಗೆ ರೋಗ ನಿಯಂತ್ರಣ, ಉನ್ನತ ತಂತ್ರಜ್ಞಾನ, ತರಬೇತಿ ಮತ್ತು ಮೌಲ್ಯವರ್ಧನೆಗೆ ವೈಜ್ಞಾನಿಕ ಮಾರ್ಗದರ್ಶನ ದೊರೆಯಲಿದೆ ಎಂದು ಮನವರಿಕೆ ಮಾಡಿಕೊಟ್ಟಿತು.
ಶಿವಮೊಗ್ಗದಲ್ಲಿ ದಕ್ಷಿಣ ಭಾರತದ ಪ್ರಾದೇಶಿಕ ಮೆಕ್ಕೆಜೋಳ ಸಂಶೋಧನಾ ಕೇಂದ್ರ ಸ್ಥಾಪನೆಗೆ ಈಗಾಗಲೇ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಜಾಗ ಮಂಜೂರಾಗಿದೆ. ಅಗತ್ಯ ಅನುದಾನ ಮತ್ತು ಸಂಪನ್ಮೂಲ ಬಿಡುಗಡೆ ಮಾಡಿ ಕಾರ್ಯಗತಗೊಳಿಸಬೇಕೆಂದು ಕೋರಿದರು.
ಮೆಕ್ಕೆಜೋಳದ ಸ್ವರ್ಣ ಪಥ ಎಂದೇ ಹೆಸರುವಾಸಿಯಾಗಿರುವ ಶಿವಮೊಗ್ಗ ವರ್ಷಕ್ಕೆ ಮೂರು ಬೆಳೆ ತೆಗೆಯಲು ಸೂಕ್ತ ವಾತಾವರಣ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಎಥೆನಾಲ್ ಬ್ಲೆಂಡಿಂಗ್ ಗುರಿಯನ್ನು ತಲುಪಲು ಹಾಗೂ ರೈತರಿಗೆ ಗುಣಮಟ್ಟದ ಹೈಬ್ರೀಡ್ ಬಿತ್ತನೆ ಬೀಜ ಒದಗಿಸಲು ಈ ಸಂಶೋಧನಾ ಕೇಂದ್ರ ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು, ಎರಡೂ ಪ್ರಸ್ತಾವನೆಗಳಿಗೆ ಸಂಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.