ಸೊರಬ&ಆನವಟ್ಟಿ ನಡುವಿನ ಕುದರಗಣೆ ಚಿತ್ರಟ್ಟೆಹಳ್ಳಿ ಗ್ರಾಮದ ಬಳಿ ಇತ್ತೀಚೆಗೆ ದುರಸ್ತಿಯಾದ ರಸ್ತೆಯಲ್ಲಿ ಪುನ@ ಗುಂಡಿಗಳ ದರ್ಶನ.
ಸೊರಬ: ಒಂದು ವಾರದಿಂದ ಸುರಿದ ಮಳೆಯಿಂದಾಗಿ ತಾಲೂಕಿನ ವಿವಿಧೆಡೆ ರಸ್ತೆಗಳಲ್ಲಿ ಗುಂಡಿಗಳಾಗಿ ವಾಹನ ಸವಾರರು ಪರದಾಡುವಂತಾಗಿದೆ.
ಸೊರಬ&ಆನವಟ್ಟಿ ಮುಖ್ಯರಸ್ತೆಯ ಚಿತ್ರಟ್ಟೆಹಳ್ಳಿ, ಕುದರಗಣೆ ಸಮೀಪ ಇತ್ತೀಚೆಗೆ ಪ್ಯಾಚ್ ವರ್ಕ್ ಹಾಗೂ ಡಾಂಬರಿಕರಣ ಮಾಡಿದ್ದ ರಸ್ತೆ ಒಂದೇ ಮಳೆಗೆ ಒಂದು ಕಿ.ಮೀ ದೂರದಷ್ಟು ಕಿತ್ತುಹೋಗಿದೆ.
ದೊಡ್ಡ ಹೊಂಡಗಳಾಗಿ ವಾಹನಗಳ ಓಡಾಟಕ್ಕೆ ಕಂಟಕವಾಗಿ ಪರಿಣಮಿಸಿವೆ. ಪ್ರತಿವರ್ಷ ಮಳೆಗಾಲ ಬಂದಾಗ ಇದೇ ಸ್ಥಿತಿ ಮುಂದುವರಿದಿದೆ. ಕಳೆದ ಬಾರಿ ಬಹಳಷ್ಟು ಮಂದಿ ಬಿದ್ದು ಗಾಯಗೊಂಡಿದ್ದಾರೆ. ಈ ಬಾರಿಯೂ ತೊಂದರೆ ತಪ್ಪಿದ್ದಲ್ಲ.
ಸೊರಬದಿಂದ ಆನವಟ್ಟಿ ಕುಪ್ಪಗಡ್ಡೆ ರಸ್ತೆಗೆ ಸಂಪರ್ಕ ಕಲ್ಪಿಸುವ ಸೊರಬ& ಜಂಗಿನಕೊಪ್ಪ ರಸ್ತೆಯಲ್ಲಿ ಗುಂಡಿಗಳಾಗಿರುವುದರಿಂದ ವಾಹನ ಸಂಚಾರ ಕಷ್ಟವಾಗಿದೆ. ಸೇತುವೆ ಕೂಡ ಹಳೆಯದಾಗಿದ್ದು ಕುಸಿಯುವ ಸ್ಥಿತಿಯಲ್ಲಿದೆ. ಸೇತುವೆ ಮೇಲಿನ ಸಂಚಾರ ಭಯ ಹುಟ್ಟಿಸುವಂತಿದೆ. ಕಳೆದ ವರ್ಷವೇ ಸೇತುವೆ ನವೀಕರಣಕ್ಕೆ ಅನುದಾನ ಮಂಜೂರಾಗಿದೆ ಎಂದು ದಂಡಾವತಿ ನೀರಾವರಿ ನಿಗಮದ ಅಭಿಯಂತ ಹೇಳಿಕೆ ನೀಡಿದ್ದರು. ಬೇಸಿಗೆ ಕಳೆದು ಮಳೆಗಾಲ ಬಂದರೂ ಕಾಮಗಾರಿ ಆರಂಭವಾಗಿಲ್ಲ. ಈ ಎರಡೂ ರಸ್ತೆಯಲ್ಲಿ ಪ್ರತಿದಿನ ಶಾಲಾ ಕಾಲೇಜು ವಿದ್ಯಾರ್ಥಿಗಳು, ರೈತರು, ಸಾರ್ವಜನಿಕರು, ನೂರಾರು ವಾಹನಗಳು ಸಂಚರಿಸುತ್ತಿವೆ. ಈಗಲೇ ರಸ್ತೆಯ ಸ್ಥಿತಿ ಹೀಗಾದರೆ ಮುಂದೆ ಸಂಚಾರದ ಸ್ಥಿತಿ ಏನು ಎಂಬುದು ಅನೇಕರ ಆತಂಕ.