Industries Minister HD Kumaraswamy
ಭದ್ರಾವತಿ; ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದೊಂದಿಗೆ ವಿಐಎಸ್ ಎಲ್ ಕಾರ್ಖಾನೆ ನವೀಕರಣಕ್ಕೆ ಬಂಡವಾಳ ತೊಡಗಿಸುವ ಕಾರ್ಯ ಈಗಾಗಲೆ ಆರಂಭವಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ವಿಐಎಸ್‌ಎಲ್ ಕಾರ್ಖಾನೆಗೆ ಶನಿವಾರ ಮಧ್ಯಾಹ್ನ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದ ಪಾಲಿಸಿಗಳು ಏನೇ ಇದ್ದರೂ ಕಾರ್ಖಾನೆಗೆ ಬಂಡವಾಳ ತೊಡಗಿಸುವ ಎಲ್ಲ ತೀರ್ಮಾನಗಳು ಆಗಿದೆ. ಆದರೆ ಬಂಡವಾಳ ತೊಡಗಿಸಲು ಹಣಕಾಸು ಇಲಾಖೆಯಿಂದ ಒಪ್ಪಿಗೆ ದೊರೆಯಬೇಕಿದೆ. ಮುಂದಿನ ಜನವರಿಯಿಂದ ನವೀಕರಣ ಕಾರ್ಯ ನಡೆಯಲಿದೆ ಎಂದರು.
ಹಳೆಯ ಯಂತ್ರೋಪರಣಗಳನ್ನು ಬದಲಾಯಿಸಿ ಹೊಸ ಯಂತ್ರೋಪಕರಣಗಳನ್ನು ಅಳವಡಿಸುವುದು ನಮ್ಮ ಪ್ರಯತ್ನವಾಗಿದೆ. ಗುತ್ತಿಗೆ ಕಾರ್ಮಿಕರಿಗೆ 15 ದಿನಗಳ ಕೆಲಸದ ಬದಲಾಗಿ 20 ದಿನಗಳ ಕೆಲಸ ಸಿಗುವಂತೆ ಮಾಡಲು ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಕಾರ್ಖಾನೆಯ ಸದ್ಯದ ಪರಿಸ್ಥಿತಿಯಲ್ಲಿ ಗುತ್ತಿಗೆ ಕಾರ್ಮಿಕರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ. ಆ ಮೂಲಕ ನಿವೃತ್ತ ಕಾರ್ಮಿಕರ ಮನೆಗಳ ಸಮಸ್ಯೆಯೂ ಬಗೆಹರಿಯಲಿದೆ. ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಮೊದಲು ಕಾರ್ಖಾನೆ ಪುನಶ್ವೇತನವಾಗಬೇಕು ಎಂದು ಅವರು ತಿಳಿಸಿದರು. ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ಸಮಸ್ಯೆ ಕುರಿತು ಮನವಿ ಸಲ್ಲಿಸಿದರು.