ತುಮರಿ ಸಮೀಪ ವಳಗೇರ ಗ್ರಾಮದಲ್ಲಿ ಬೇಲಿ ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾರ್ಗಲ್ ಕೆಪಿಸಿ ಕಚೇರಿಯಲ್ಲಿ ಮುಖ್ಯ ಅಭಿಯಂತರ ಜತೆ ಹರತಾಳು ಹಾಲಪ್ಪ, ಪ್ರಸನ್ನ ಕೆರೆಕೈ, ಮಲ್ಲಿಕಾರ್ಜುನ ಹಕ್ರೆ ಮತ್ತಿತರರು ಮಾತುಕತೆ ನಡೆಸಿದರು. 
ಶಿವಮೊಗ್ಗ

ಬೇಲಿ ತೆರವು; ಕೆಪಿಸಿ ವಿರುದ್ಧ ಆಕ್ರೋಶ | Protest

ಕಾರ್ಗಲ್: ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಳಗೆರೆ ಗ್ರಾಮದಲ್ಲಿ ಬೇಲಿ ತೆರವುಗೊಳಿಸಿ ನೋಟಿಸ್ ನೀಡಿದ ಕೆಪಿಸಿ ಅಧಿಕಾರಿಗಳ ಧೋರಣೆ ಖಂಡಿಸಿ ತಾಲೂಕು ಬಿಜೆಪಿ ಪ್ರಮುಖರು ಮಾಜಿ ಸಚಿವ ಹರತಾಳು ಹಾಲಪ್ಪ ನೇತೃತ್ವದಲ್ಲಿ ಕಾರ್ಗಲ್ ಕೆಪಿಸಿ ಸಿವಿಲ್ ಮುಖ್ಯ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಶರಾವತಿ ಸಂತ್ರಸ್ತ ರೈತರು ಹಿನ್ನೀರ ತಟದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಎಲ್ಲವೂ ನಮ್ಮದೇ ಭೂಮಿ. ವಿದ್ಯುತ್ ಉತ್ಪಾದನೆಗಾಗಿ ಅಣೆಕಟ್ಟು ನಿರ್ಮಾಣವಾಗಿದೆ. ಜಲಾಶಯ ಭರ್ತಿಯಾದರೆ ಜಾಗ ಖಾಲಿ ಮಾಡಿ ಮೇಲೆ ಹೋಗುತ್ತಾರೆ. ಇದರಲ್ಲಿ ನಿಮ್ಮ ತೆರವಿನ ಕಾರ್ಯಾಚರಣೆ ಏಕೆ? ಜನರು ಬದುಕಲಿ ಎಂದು ಹಾಲಪ್ಪ ಮನವರಿಕೆ ಮಾಡಿಕೊಟ್ಟರು.
ಕೇಂದ್ರ ಸಾಂಬಾರು ಮಂಡಳಿ ಸದಸ್ಯ ಪ್ರಸನ್ನ ಕೆರೆಕೈ ಮಾತನಾಡಿ, ಹಿನ್ನೀರ ವ್ಯಾಪ್ತಿಯ ಅಂಚಿನಲ್ಲೇ ದೊಡ್ಡ ಕಟ್ಟಡ ಕಟ್ಟಿಕೊಂಡವರಿದ್ದಾರೆ. ಆದರೆ ಕೃಷಿ ಮಾಡುವ ಬಡಪಾಯಿಗೆ ಯಾರದೋ ಮಾತು ಕೇಳಿ ನೋಟಿಸ್ ನೀಡಿ ಬೇಲಿ ತೆರವು ಮಾಡುವುದು ಎಷ್ಟು ಸರಿ? ಕೆಪಿಸಿ ಕಚೇರಿಯಾಗಿ ಕೆಲಸ ಮಾಡಿ. ಆದರೆ ಕೆಪಿಸಿಸಿ ಕಚೇರಿಯಾಗಿ ಕೆಲಸ ಮಾಡಬೇಡಿ ಎಂದರು.
ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಲಿಂಗನಮಕ್ಕಿ ಜಲಾಶಯದ ಹಿನ್ನೀರಿನ ವ್ಯಾಪ್ತಿಯಲ್ಲಿ ಕೆಪಿಸಿಯ ಹೆಚ್ಚುವರಿ ಭೂಮಿಯಲ್ಲಿ ಹೊಸನಗರ ತಾಲೂಕಿನಲ್ಲಿ 6400 ಕುಟುಂಬಗಳು ವಾಸವಿದೆ. ಸಾಗರ ತಾಲೂಕಿನ ಕರೂರು, ಭಾರಂಗಿ ಹಾಗೂ ಆವಿನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ  6-7 ಸಾವಿರ ಜನ ಬದುಕು ಕಟ್ಟಿಕೊಂಡಿದ್ದಾರೆ. ಇದೀಗ ಇವರನ್ನು ತೆರವು ಮಾಡಿ ನೋಟಿಸ್ ನೀಡಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂತಹ ಘಟನೆಗಳಿಗೆ ಇನ್ನು ಮುಂದೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸುವ ಬಗ್ಗೆ ಕೆಪಿಸಿ ಸಿವಿಲ್ ಮುಖ್ಯ ಅಭಿಯಂತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಯಿತು. ಕೆಪಿಸಿ ಸಿವಿಲ್ ವಿಭಾಗದ ಮುಖ್ಯ ಅಭಿಯಂತ ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ್, ಎಇ ಆರ್.ಶಿವಕುಮಾರ್ ಮನವಿ ಸ್ವೀಕರಿಸಿದರು. 
ತಾಲೂಕು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ದೇವೇಂದ್ರಪ್ಪ, ಕಾರ್ಯದರ್ಶಿ ನಾಗರಾಜ್ ಬಬ್ಬಿಗೆ, ಗ್ರಾಪಂ ಮಾಜಿ ಅಧ್ಯಕ್ಷ ಪ್ರಸನ್ನ ಕೊಳಚಗಾರು, ಪಕ್ಷದ ಪ್ರಮುಖರಾದ ನವೀನ್ ಜೈನ್, ಶರತ್, ಸೂರಜ್ ಜೈನ್ ಇತರರಿದ್ದರು.