ಬಿ.ವೈ.ರಾಘವೇಂದ್ರ, ಲೋಕಸಭಾ ಸದಸ್ಯ
- ಜಲಸಂಪನ್ಮೂಲ ಸಚಿವರಿಗೆ ಬಿವೈಆರ್ ಮನವಿ
- 100 ಕೋಟಿ ರೂ.ಗೆ ಪ್ರಸ್ತಾವನೆ
ಶಿವಮೊಗ್ಗ : ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ (raghavendra) ಜಿಲ್ಲೆಯ ಹಲವು ನೀರಾವರಿ (irrigation) ಯೋಜನೆ (scheme) ಗಳ ಕುರಿತು ಸಮಾಲೋಚನೆ ನಡೆಸಿದರು. ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡುವಂತೆ ಕೋರಿದರು.
ತುಂಗಾ ಏತ ನೀರಾವರಿ ಯೋಜನೆಯಡಿ ಮೂರು ಪ್ರಮುಖ ಕೆರೆಗಳ ಕಾಲುವೆ ಆಧುನೀಕರಣ, ಪ್ರವಾಹ ನಿಯಂತ್ರಣ ತಡೆಗೋಡೆ ನಿರ್ಮಾಣ ಸೇರಿ ಒಟ್ಟು ಸುಮಾರು 100 ಕೋಟಿ ರೂ. ಹಾಗೂ ಜಿಲ್ಲೆಯ ಏತ ನೀರಾವರಿ ಯೋಜನೆಗಳ ಬಾಕಿ ಬಿಲ್ ಮೊತ್ತ ಸುಮಾರು 62.56 ಕೋಟಿ ರೂ. ಪಾವತಿಗೆ ಕೂಡಲೇ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು.
ಹಾಯ್‌ಹೊಳೆ, ಬಾರೆಹಳ್ಳ (ಪುರದಾಳು) ಮತ್ತು ಗೌಡನಕೆರೆಗಳ ಕೆರೆಗಳ ಕಾಲುವೆ ಆಧುನೀಕರಣ ಸೇರಿ ವಿವಿಧ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ಒದಗಿಸಲು ಅಗತ್ಯ ಅನುದಾನವನ್ನು ತುರ್ತಾಗಿ ಬಿಡುಗಡೆಗೊಳಿಸಿ, ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಿದರು.
ಮಣ್ಣಿನ ಕಾಲುವೆಗಳಲ್ಲಿ ಹೂಳು ತುಂಬಿರುವುದರಿಂದ ಕೊನೆಯ ಭಾಗದ ಜಮೀನಿಗೆ ನೀರು ತಲುಪುತ್ತಿಲ್ಲ. ಈ ಪ್ರಮುಖ ಮೂರು ಕೆರೆಗಳ ವ್ಯಾಪ್ತಿಯ ನಾಲೆಗಳ ಅಭಿವೃದ್ಧಿ ಹಾಗೂ ಆಧುನೀಕರಣಕ್ಕೆ ಸುಮಾರು 80 ಕೋಟಿ ರೂ. ಮತ್ತು ಕೂಡ್ಲಿ ಹಾಗೂ ಹೊಳೆಬೆನವಳ್ಳಿ ಗ್ರಾಮದ ಬಳಿ ಪ್ರವಾಹ ನಿಯಂತ್ರಣಕ್ಕಾಗಿ ತುಂಗಾ ನದಿಗೆ ತಡೆಗೋಡೆ ನಿರ್ಮಿಸಲು 20 ಕೋಟಿ ರೂ. ಸೇರಿ ಒಟ್ಟು 100 ಕೋಟಿ ರೂ. ಮೊತ್ತದ ಕಾಮಗಾರಿಗಳ ಆಡಳಿತಾತ್ಮಕ ಅನುಮೋದನೆಯ ಪ್ರಸ್ತಾವನೆಗೆ ಹಸಿರು ನಿಶಾನೆ ನೀಡಬೇಕೆಂದು ಮನವಿ ಮಾಡಿದರು.
ವಿದ್ಯುತ್ ಬಿಲ್ ಪಾವತಿಸಿಲ್ಲ
ಜಿಲ್ಲೆಯ ಏತ ನೀರಾವರಿ ಯೋಜನೆಗಳ ವಿದ್ಯುತ್ ಬಿಲ್ ಪಾವತಿಸದ ಕಾರಣದಿಂದ ಸಂಪರ್ಕ ಕಡಿತಗೊಳಿಸಲಾಗಿದೆ. ಜಿಲ್ಲೆಯಲ್ಲಿ ನಿರೀಕ್ಷಿತ ಮಳೆಯಾಗದೆ ನೀರಿನ ಮಟ್ಟ ಕುಸಿದಿರುವ ಈ ಸಂದರ್ಭದಲ್ಲಿ, ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಕಾರ್ಯ ಸ್ಥಗಿತಗೊಳ್ಳದಂತೆ ತಡೆಯಬೇಕು. ಸಣ್ಣ ಮತ್ತು ಬೃಹತ್ ಏತ ನೀರಾವರಿ ಯೋಜನೆಗಳ ವಿದ್ಯುತ್ ಬಿಲ್ ಬಾಕಿ ನೆಪದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದು ಸರಿಯಲ್ಲ. ಆಡಳಿತಾತ್ಮಕ ಹಾಗೂ ಆರ್ಥಿಕ ಕಾರಣಗಳಿಂದ ಉಂಟಾಗಿರುವ ಸಮಸ್ಯೆಯನ್ನು ರೈತರ ಮೇಲೆ ಹೊರಿಸುವುದು ಸರಿಯಲ್ಲ. ಶಿಕಾರಿಪುರದ ಉಡುಗಣಿ- ತಾಳಗುಂದ- ಹೊಸೂರು, ಕಸಬಾ ಮತ್ತು ಸನ್ಯಾಸಿಕೊಪ್ಪ ಯೋಜನೆಗಳು ಹಾಗೂ ಸೊರಬ ತಾಲೂಕಿನ ಮೂಡಿ, ಮೂಗೂರು ಮತ್ತು ಕಚವಿ ಏತ ನೀರಾವರಿ ಯೋಜನೆಗಳು ಸೇರಿ ಒಟ್ಟು 8 ಪ್ರಮುಖ ಯೋಜನೆಗಳ ಸುಮಾರು 62.56 ಕೋಟಿ ರೂ. ಬಾಕಿ ವಿದ್ಯುತ್ ಬಿಲ್ ಪಾವತಿಸಲು ರಾಜ್ಯ ಸರ್ಕಾರ ತುರ್ತಾಗಿ ಅನುದಾನ ಬಿಡುಗಡೆ ಮಾಡಬೇಕೆಂದು ಬಿವೈಆರ್ ಒತ್ತಾಯಿಸಿದರು.