ಸಾಗರದಲ್ಲಿ ಆಯೋಜಿಸಿದ್ದ ನಗರಸಭೆ ಅಧಿಕಾರಿಗಳ ಸಭೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿದರು. ಎಚ್.ಕೆ.ನಾಗಪ್ಪ, ರಂಗಸ್ವಾಮಿ ಇತರರಿದ್ದರು.
ಸಾಗರ: ನಗರಸಭೆಯಲ್ಲಿ ಸಾರ್ವಜನಿಕರ ಕೆಲಸ ವ್ಯವಸ್ಥಿತವಾಗಿ ನಡೆಯಬೇಕು. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಬ್ರೋಕರ್‌ಗಿರಿ ನಡೆಸಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಎಚ್ಚರಿಸಿದರು.
ಸಾಗರ ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧಿಕಾರಿಗಳ ಸಭೆ ನಡೆಸಿದ ಅವರು, ಬ್ರೋಕರ್‌ಗಳಿಗೆ ನಗರಸಭೆ ಆವರಣದಲ್ಲಿ ಏನು ಕೆಲಸ? ಅವರನ್ನು ಯಾವ ಕಾರಣಕ್ಕೂ ಬೆಂಬಲಿಸಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಗರ ವ್ಯಾಪ್ತಿಯಲ್ಲಿ ನಕಲಿ ಹಕ್ಕುಪತ್ರ ತಯಾರಿಸಿ ನಗರಸಭೆ ಜಾಗ ಲಪಟಾಯಿಸುತ್ತಿದ್ದಾರೆ ಎನ್ನುವ ದೂರುಗಳು ವ್ಯಾಪಕವಾಗಿವೆ. ಶ್ರೀಧರ ನಗರ, ರಾಮನಗರ ಇನ್ನಿತರೆ ಕಡೆಗಳಲ್ಲಿ ನಗರಸಭೆಯಿಂದ ಕಾಯ್ದಿರಿಸಿದ ನಿವೇಶನ ಪಟ್ಟಿಯನ್ನು ತಕ್ಷಣ ಸಿದ್ಧಪಡಿಸಿ ಅದನ್ನು ಬಂದೋಬಸ್ತ್ ಮಾಡಿ. ನಗರಸಭೆ ಜಾಗವನ್ನು ಅನಧಿಕೃತವಾಗಿ ಪರಭಾರೆ ಮಾಡಿಕೊಟ್ಟರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಐದು ವರ್ಷಗಳಿಂದ ನಗರಸಭೆಯಲ್ಲಿ ಬೀಡುಬಿಟ್ಟ ಅಧಿಕಾರಿ, ಸಿಬ್ಬಂದಿಯನ್ನು ಬೇರೆ ಕಡೆ ವರ್ಗಾವಣೆ ಮಾಡಲಾಗುವುದು. ಎಂಟು ವರ್ಷಗಳಿಂದ ಈಚೆಗೆ ನಗರಸಭೆ ನಿವೇಶನ ಎಷ್ಟಿದ್ದವು? ಅವುಗಳ ಈಗಿನ ಪರಿಸ್ಥಿತಿ ಏನು ಎಂಬುದರ ವಿವರ ನನಗೆ ಕೊಡಿ. ಇಲ್ಲಿ ನೆಲನುಂಗುವರ ಸಂಖ್ಯೆ ಜಾಸ್ತಿ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶೀಘ್ರವೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಗರಸಭೆ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ. ಅಲ್ಲಿ ಅಂತಿಮ ನಿರ್ಣಯ ತೆಗೆದುಕೊಂಡು, ನಗರಸಭೆ ಜಾಗವನ್ನು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಿಸಿ ಅಭಿವೃದ್ಧಿ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದರು.
ಪೌರಾಯುಕ್ತ ಎಚ್.ಕೆ.ನಾಗಪ್ಪ, ನಗರಸಭೆ ಯೋಜನಾಧಿಕಾರಿ ರಂಗಸ್ವಾಮಿ, ನಗರಾಭಿವದ್ಧಿ ಕೋಶದ ಕಾರ್ಯಪಾಲಕ ಅಭಿಯಂತ ನದಾಫ್ ಇತರರಿದ್ದರು.