ಭದ್ರಾವತಿಯಲ್ಲಿ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ ಆಚರಣೆಯಲ್ಲಿ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿದರು. ಗೀತಾ ರಾಜಕುಮಾರ್, ಸುವರ್ಣಮ್ಮ, ಚನ್ನೇಶ್ ಬಸವರಾಜಯ್ಯ, ಸುವರ್ಣಮ್ಮ ಇದ್ದರು.
ಭದ್ರಾವತಿ: ಕಾಯ ಮತ್ತು ಜೀವ ಒಟ್ಟಿಗಿದ್ದರೆ ಮಾತ್ರ ಜೀವನ. ಮುಂದಿನ ಪೀಳಿಗೆಯ ಅಧ್ಯಯನಕ್ಕೆ ಉಪಯೋಗವಾಗುತ್ತದೆ ಎಂದಾದರೆ ಈ ದೇಹವನ್ನೇಕೆ ದಾನ ಮಾಡಬಾರದು ಎಂದು ಶಿವಮೊಗ್ಗ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಅಭಿಪ್ರಾಯಪಟ್ಟರು
ಹಳೇನಗರದಲ್ಲಿ ಶ್ರೀ ಅಕ್ಕಮಹಾದೇವಿ ಬಳಗ ಆಯೋಜಿದ್ದ ಶ್ರೀ ಅಕ್ಕಮಹಾದೇವಿ ಅವರ ಜಯಂತ್ಯುತ್ಸವ ಸಮಾರಂಭ ಹಾಗೂ ಮಹಿಳಾ ಜಾಗೃತಿ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸರ್ಕಾರಗಳು ಮಹಾನುಭಾವರ ಜಯಂತಿಗಳಿಗೆ ರಜೆ ಘೋಷಿಸುವ ಬದಲು ಅಂದು ಅವರ ಜೀವನ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ರಜೆ ಇಲ್ಲದೆ ದುಡಿಯುವ ಕಾರ್ಮಿಕರು ಈ ಪ್ರಪಂಚದಲ್ಲಿ ಇದ್ದಾರೆ ಎಂದರೆ ಅದು ಮಹಿಳೆಯರು ಮಾತ್ರ. ಅವರನ್ನು ನಾವೆಲ್ಲರೂ ಗೌರವಿಸಬೇಕು ಎಂದರು.
ಅಕ್ಕಮಹಾದೇವಿ ಅವರು ಆತ್ಮಬಲದ ಕಾರಣಕ್ಕಾಗಿ ಇಂದಿಗೂ ಎಲ್ಲರಿಗೂ ಮಾದರಿಯಾಗಿದ್ದಾರೆಯೇ ಹೊರತು ದಿಗಂಬರತ್ವದ ಅನುಕರಣೆಯಿಂದಲ್ಲ. ಅವರ ಆತ್ಮಬಲ ಎಂದಿಗೂ ಅವರನ್ನು ಕುಗ್ಗಿಸಲಿಲ್ಲ. ಬಸವಣ್ಣ, ಅಲ್ಲಮಪ್ರಭು ಅವರೊಂದಿಗೆ ಹೊರತುಪಡಿಸಿದರೆ ಮನುಷ್ಯರೊಂದಿಗೆ ಅಕ್ಕಮಹಾದೇವಿ ಅವರ ಸಂವಾದ ಬಹಳ ಕಡಿಮೆ ಇತ್ತು. ಪ್ರಕೃತಿಯೊಂದಿಗಿನ ಸಂಪರ್ಕ ಜಾಸ್ತಿ ಇಟ್ಟುಕೊಂಡಿದ್ದರು ಎಂದು ಹೇಳಿದರು.
ಕುವೆಂಪು ವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ ಮಾತನಾಡಿ, ಅಕ್ಕನ ವಚನಗಳಲ್ಲಿ ಇಡೀ ಕರ್ನಾಟಕದ ಸಂಸ್ಕೃತಿ, ಸಾಹಿತ್ಯ ಅಡಗಿದೆ. ಎಲ್ಲ ಮೇರೆಗಳನ್ನು ಮೀರಿ ನಿಲ್ಲಲು ಅಕ್ಕನಿಗೆ ಮಾತ್ರ ಸಾಧ್ಯವಾಯಿತು. ಹೆಣ್ಣಿನ ಸಹಿಷ್ಣತೆ, ನೋವು, ಸಹನೆಗಳು ರಾಮಾಯಣ ಮಹಾಭಾರತದಿಂದಲೂ ನಡೆಯುತ್ತಲೇ ಇದೆ ಹಾಗೆಯೆ ಚರ್ಚೆಗಳೂ ನಡೆಯುತ್ತಲೇ ಇದೆ ಎಂದರು.
ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ಸದಸ್ಯ ಬಿ.ಕೆ.ಮೋಹನ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಚನ್ನೇಶ್ ಬಸವರಾಜಯ್ಯ, ಅಕ್ಕಮಹಾದೇವಿ ಬಳಗದ ಅಧ್ಯಕ್ಷೆ ಸುವರ್ಣಮ್ಮ ಹಿರೇಮಠ್ ಇತರರಿದ್ದರು.