ಜಡೆ ಹೋಬಳಿ ಗ್ರಾಮವೊಂದರಲ್ಲಿ ಕೂರಿಗೆ ಭತ್ತ ಬಿತ್ತನೆ ಮಾಡುತ್ತಿರುವುದು. 
ಶಿವಮೊಗ್ಗ

ರೈತರಲ್ಲಿ ನಿರೀಕ್ಷೆ ಹೆಚ್ಚಿಸಿದ ಮಳೆ | cultivation

ಸೊರಬ: ತಾಲೂಕಿನಲ್ಲಿ ಮೆಕ್ಕೆಜೋಳದ ಬಿತ್ತನೆಗೆ ಭೂಮಿ ಹದಗೊಳಿಸುವ ಕಾರ್ಯ ಎಲ್ಲೆಡೆ ನಡೆಯುತ್ತಿದೆ. ಕೆಲವಡೆ ರೈತರು ಮೆಕ್ಕೆಜೋಳದ  ಬಿತ್ತನೆ ಮಾಡುತ್ತಿದ್ದಾರೆ. ಇನ್ನೊಂದೆಡೆ ತಾಲೂಕಿನ ಜಡೆ, ಆನವಟ್ಟಿ ಹೋಬಳಿಗಳಲ್ಲಿ ಕೂರಿಗೆ ಬಿತ್ತನೆ ಆರಂಭವಾಗಿದೆ.
ತಾಲೂಕಿನಲ್ಲಿ ಜನವರಿಯಿಂದ ಮೇ ತಿಂಗಳ ಅಂತ್ಯದವರೆಗೆ ವಾಡಿಕೆ ಮಳೆಯು 110.9 ಮಿ.ಮೀ. ಇತ್ತು. ಪ್ರಸ್ತುತ 167.9 ಮಿ.ಮೀ ಮಳೆಯಾಗಿದೆ. ಶೇ.51ರಷ್ಟು ಹೆಚ್ಚು ಮಳೆಯಾಗಿರುತ್ತದೆ.
ಪ್ರತಿದಿನ ಬೆಳಗ್ಗೆ ಮೋಡ ಕವಿದ ವಾತಾವರಣ ಇರುತ್ತದೆ. ಮಧ್ಯಾಹ್ನದ ಮೇಳೆಗೆ ಮಳೆ ಸುರಿಸುವ ಮಳೆರಾಯ ಕಳೆದರೆಡು ದಿನಗಳಿಂದ ಭೂಮಿಯನ್ನು ತಂಪಾಗಿಸಿ ಬಿತ್ತನೆ ಕಾರ್ಯಕ್ಕೆ ಅನುಕೂಲವಾಗಿದೆ. ಇತೀಚಿನ ವರ್ಷಗಳಲ್ಲಿ  ಭತ್ತ ಬಿತ್ತನೆಗಿಂತ ರೈತರು ನಾಟಿ ಕಾರ್ಯಕ್ಕೆ ಹೆಚ್ಚು ಹೊಂದಿಕೊಂಡಿದ್ದಾರೆ. ಅರೆಮಲೆನಾಡು ಆನವಟ್ಟಿ, ಜಡೆ, ಹಾಗೂ ಕುಪ್ಪಗಡ್ಡೆ  ಹೋಬಳಿಯಲ್ಲಿ ಕೂರಿಗೆ ಬಿತ್ತನೆ ಸಾಂಪ್ರದಾಯಿಕವಾಗಿ ಮುಂದುವರಿದಿದೆ. ಮೇ ಕೊನೆಯ ವಾರದಿಂದ ಕೂರಿಗಿ ಬಿತ್ತನೆ ಭರದಿಂದ ಸಾಗಿದೆ. ಕೃಷಿ ಇಲಾಖೆಯ ಸಮೀಕ್ಷೆಯಂತೆ ಈ ಬಾರಿ 2000 ಹೆಕ್ಟೇರ್ ಕೂರಿಗೆ ಬಿತ್ತನೆ ನಡೆಯುವ ಸಾಧ್ಯತೆ ಇದೆ. ಈ ಬಾರಿ ತಾಲೂಕಿನಲ್ಲಿ 2026ನೇ ಮುಂಗಾರು ಹಂಗಾಮಿನಲ್ಲಿ 18,500 ಹೆಕ್ಟೇರ್‌ನಲ್ಲಿ ಭತ್ತ ನಾಟಿ ಮಾಡುವ ನಿರೀಕ್ಷೆ ಇದೆ. ಸುಮಾರು 7000 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತನೆಯಾಗುವ ಸಾಧ್ಯತೆ ಇದೆ.
ತಾಲೂಕಿನಲ್ಲಿ ಮೆಕ್ಕೆಜೋಳ 850 ಕ್ವಿಂಟಾಲ್ ಮತ್ತು ಭತ್ತ 3250 ಕ್ವಿಂಟಾಲ್ ಅವಶ್ಯಕತೆ ಇರುತ್ತದೆ. ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ಪ್ರಸ್ತುತ ಮೆಕ್ಕೆಜೋಳ 378 ಕ್ವಿಂಟಾಲ್, ಭತ್ತ 1294 ಕ್ವಿಂಟಾಲ್ ದಾಸ್ತಾನು ಇದೆ. ಮೆಕ್ಕೆಜೋಳ ಬೆಳೆಗೆ ಪ್ರತಿ ಕೆ.ಜಿ.ಗೆ ಸಾಮಾನ್ಯ ವರ್ಗದವರಿಗೆ 20 ರೂ., ಎಸ್‌ಸಿ, ಎಸ್‌ಟಿ ರೈತರಿಗೆ 30 ರೂ. ಸಹಾಯಧನ ಲಭ್ಯವಿದೆ. ಭತ್ತದ ಬೀಜಕ್ಕೆ ಪ್ರತಿ ಕೆ.ಜಿಗೆ ಸಾಮಾನ್ಯ ವರ್ಗದವರಿಗೆ 8 ರೂ., ಎಸ್‌ಸಿ, ಎಸ್‌ಟಿ ರೈತರಿಗೆ 12 ರೂ. ಸಹಾಯಧನ ಲಭ್ಯವಿದೆ.

ಡಿಎಪಿ, ಯೂರಿಯಾ ಕೊರತೆ

ಏಪ್ರಿಲ್‌ನಿಂದ ಜೂನ್ ಮಾಹೆವರೆಗಿನ ರಸಗೊಬ್ಬರ ಬೇಡಿಕೆ ಹೆಚ್ಚಾಗಿದೆ. ಯೂರಿಯಾ ಮತ್ತು ಡಿಎಪಿ ಗೊಬ್ಬರಕ್ಕೆ ಬಹು ಬೇಡಿಕೆ ಇದೆ. ತಾಲೂಕಿನಲ್ಲಿ 2,095 ಟನ್ ಯೂರಿಯಾ ಬೇಡಿಕೆ ಇದ್ದು, ಈಗಾಗಲೇ 1,053 ಟನ್ ವಿತರಣೆಯಾಗಿದೆ. 874.5 ಟನ್ ದಾಸ್ತಾನು ಇದೆ. ಡಿಎಪಿ 1,221 ಟನ್ ಬೇಡಿಕೆ ಇದೆ. ಈಗಾಗಲೇ 804 ಟನ್ ವಿತರಣೆಯಾಗಿ 244.6 ಟನ್ ದಾಸ್ತಾನು ಮಾಡಲಾಗಿದೆ. ಆದರೆ ಕಾಂಪ್ಲೆಕ್ಸ್ ಗೊಬ್ಬರಗಳಾದ ಎಂಒಪಿ, ಎನ್‌ಪಿಕೆ, ಎಸ್‌ಎಸ್‌ಪಿ, ಎನ್‌ಐಎಒ ಗೊಬ್ಬರಗಳ ದಾಸ್ತಾನು ಮತ್ತು ಬೇಡಿಕೆಗೆ ಪ್ರಮಾಣ ಸಮನಾಗಿದೆ. ಉಳುಮೆ ಮಾಡಲು ಟ್ರಾೃಕ್ಟರ್, ಟಿಲ್ಲರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಈ ನಡುವೆ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗಿ ಯಂತ್ರಗಳ ಮಾಲೀಕರು ಪ್ರತಿ ಗಂಟೆಗೆ 900 ರೂ. ಬಾಡಿಗೆಯನ್ನು 1200 ರೂ.ಗೆ ಹೆಚ್ಚಳ ಮಾಡಿದಾರೆ. ಇದರಿಂದ ಮಧ್ಯಮ ಮತ್ತು ಸಣ್ಣ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ.