ಶಿವಮೊಗ್ಗ ವಿದ್ಯಾನಗರದಲ್ಲಿ ರೈಲ್ವೆ ಅಂಡರ್‌ಪಾಸ್ ಕಾಮಗಾರಿಗೆ ಬಿ.ವೈ.ರಾಘವೇಂದ್ರ ಗುದ್ದಲಿಪೂಜೆ ನೆರವೇರಿಸಿದರು. ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಎನ್.ಕೆ.ಜಗದೀಶ್, ಮೋಹನ್ ರೆಡ್ಡಿ, ಎಸ್.ಜ್ಞಾನೇಶ್ವರ್, ಯಮುನಾ ರಂಗೇಗೌಡ ಇದ್ದರು. 
ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ರೈಲ್ವೆ ಅಂಡರ್‌ಪಾಸ್ I underpass in shivamogga

ಪ್ರಮುಖ ಮುಖ್ಯಾಂಶಗಳು

  • 300 ಕೋಟಿ ರೂ. ವೆಚ್ಚದ ಕಾಮಗಾರಿಗಳು
  • ಕೆಲವೆಡೆ ಮೇಲ್ಸೇತುವೆ ನಿರ್ಮಾಣ
  • ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾಹಿತಿ
ಶಿವಮೊಗ್ಗ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ಹಲವು ರೈಲ್ವೆ (railway) ಮೇಲ್ಸೇತುವೆ ಹಾಗೂ ಅಂಡರ್‌ಪಾಸ್‌ (underpass) ಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಮುಂಬರುವ ದಿನಗಳಲ್ಲಿ ಸಾರ್ವಜನಿಕರಿಗೆ ರೈಲ್ವೆ ಕ್ರಾಸಿಂಗ್‌ನಲ್ಲಿ ಹೆಚ್ಚು ಸಮಯ ವ್ಯರ್ಥವಾಗುವುದು ತಪ್ಪಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ (raghavendra) ಹೇಳಿದರು.
ವಿದ್ಯಾನಗರ ರೈಲ್ವೆ ಮೇಲ್ಸೇತುವೆ ಪಕ್ಕದಲ್ಲಿಯೇ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ರೈಲ್ವೆ ಅಂಡರ್‌ಪಾಸ್ ಕಾಮಗಾರಿಗೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಗುಂಡಪ್ಪ ಶೆಡ್‌ಗೆ ಸಂಪರ್ಕ ಕಲ್ಪಿಸಲು ರೈಲ್ವೆ ಇಲಾಖೆಯಿಂದ ಅಂಡರ್‌ಪಾಸ್ ನಿರ್ಮಿಸಲಾಗುತ್ತದೆ. ಸರ್ವೇ ನಡೆಸಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸಾಗರ ರಸ್ತೆಯ ಕುಂಸಿ, ಯಡೇಹಳ್ಳಿ, ಹೊಸೂರು, ತಾಳಗುಪ್ಪದಲ್ಲಿ ಅಂಡರ್‌ಪಾಸ್ ನಿರ್ಮಿಸಲಾಗುವುದು ಎಂದು ಹೇಳಿದರು.
ಈಗ ಶಂಕುಸ್ಥಾಪನೆ ಮಾಡಿರುವ ಜಾಗದ ಸಮೀಪದಲ್ಲೇ ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 46 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸಲಾಗಿತ್ತು. ಆದರೆ ವಿದ್ಯಾನಗರ, ಚಿಕ್ಕಲ್, ಶಾಂತಮ್ಮ ಲೇಔಟ್ ಹಾಗೂ ಅರಕೇಶ್ವರ ದೇವಸ್ಥಾನ ಭಾಗದ ನಿವಾಸಿಗಳಿಗೆ ಮೇಲ್ಸೇತುವೆ ಮೂಲಕ ಸಂಚರಿಸಲು ದೂರವಾಗುತ್ತಿತ್ತು. ಹೀಗಾಗಿ ಶಾಸಕ ಚನ್ನಬಸಪ್ಪ ಹಾಗೂ ಸ್ಥಳೀಯ ಮುಖಂಡರ ಸಲಹೆಯಂತೆ ಕೇಂದ್ರ ಸರ್ಕಾರದಿಂದ 5 ಕೋಟಿ ರೂ. ಅನುದಾನ ಪಡೆದು ಅಂಡರ್‌ಪಾಸ್ ನಿರ್ಮಿಸಲಾಗುತ್ತಿದೆ ಎಂದರು.
ಇಲ್ಲಿ ಎರಡು ಅಂಡರ್‌ಪಾಸ್ ಆಗಲಿವೆ. ಒಂದು ಸಿಸಿಎಫ್ ಕಚೇರಿ ಕಡೆಯಿಂದ ಹಾಗೂ ಮತ್ತೊಂದು ಅದರ ಬಲಗಡೆಯಿಂದ ಬರಲಿದ್ದು, ಇವೆರಡೂ ಒಂದೇ ಜಂಕ್ಷನ್‌ನಲ್ಲಿ ಸೇರಲಿವೆ. ಭವಿಷ್ಯದಲ್ಲಿ ಬೀರೂರು-ಶಿವಮೊಗ್ಗ ರೈಲ್ವೆ ಹಳಿ ದ್ವಿಪಥಗೊಂಡರೂ ತೊಂದರೆ ಆಗದಂತೆ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಬೆಳೆದಿದ್ದ ಅಕೇಶಿಯಾ ಮರಗಳನ್ನು ತೆರವುಗೊಳಿಸಲು ಅನುಮತಿ ಸಿಕ್ಕಿದ್ದು, ಮೂರು ತಿಂಗಳಲ್ಲಿ ಕಾರ್ಯ ಪೂರ್ಣವಾಗಲಿದೆ ಎಂದು ತಿಳಿಸಿದರು.
ನಗರದ ಫ್ರೀಡಂ ಪಾರ್ಕ್‌ನಿಂದ ಬೊಮ್ಮನಕಟ್ಟೆಗೆ ಸಂಪರ್ಕಿಸುವ ಜಾಗದಲ್ಲಿ ಭೂಸ್ವಾಧೀನ ವೆಚ್ಚವೂ ಸೇರಿದಂತೆ ಒಟ್ಟು 70 ಕೋಟಿ ರೂ.ವೆಚ್ಚದಲ್ಲಿ ಅಂಡರ್‌ಪಾಸ್ ಕಾಮಗಾರಿ ನಡೆಯಲಿದೆ. ಕುಂಸಿ, ಯಡೆಹಳ್ಳಿ, ಹೊಸೂರು ಹಾಗೂ ತಾಳಗುಪ್ಪ ಅಂಡರ್‌ಪಾಸ್‌ಗಳಿಗೆ 120 ಕೋಟಿ ರೂ. ಮೀಸಲಿಡಲಾಗಿದೆ ಎಂದು ಹೇಳಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿಗಳಾದ ಡಿ.ಎಸ್.ಅರುಣ್, ಬಲ್ಕಿಶ್ ಬಾನು, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ಪಾಲಿಕೆ ಮಾಜಿ ಸದಸ್ಯರಾದ ಎಸ್.ಜ್ಞಾನೇಶ್ವರ್, ಯಮುನಾ ರಂಗೇಗೌಡ ಇತರರಿದ್ದರು.

ಬಲ್ಕಿಶ್ ಬಾನು ಮೆಚ್ಚುಗೆ

ವಿದ್ಯಾನಗರ ಅಂಡರ್‌ಪಾಸ್ ನಿರ್ಮಾಣದ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆಬಲ್ಕಿಶ್ ಬಾನು ಅವರು ಸಂಸದ ಬಿ.ವೈ.ರಾಘವೇಂದ್ರ ಕೈಗೊಂಡ ಅಭಿವೃದ್ಧಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲೆಯ ಅಭಿವೃದ್ಧಿಗೆ ರಾಘವೇಂದ್ರ ಅವರು ನೀಡುತ್ತಿರುವ ಕೊಡುಗೆ ಶ್ಲಾಘನೀಯ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿರುವ ರಾಘವೇಂದ್ರ ಅಭಿವೃದ್ಧಿ ವಿಚಾರದಲ್ಲಿ ಎಲ್ಲ ವರ್ಗದ ಜನರ ವಿಶ್ವಾಸ ಗಳಿಸಿದ್ದಾರೆ. ಮುಸ್ಲಿಂ ಸಮುದಾಯದಿಂದಲೂ ಮತ ಪಡೆಯುವಷ್ಟು ಜನಪ್ರಿಯತೆ ಗಳಿಸಿರುವುದು ಸಂತಸದ ಸಂಗತಿ ಎಂದು ಅವರು ಹೇಳಿದರು.
ರಾಜ್ಯಾಧ್ಯಕ್ಷರಿಗೆ ಕಪ್ಪುಚುಕ್ಕೆ ತರುವ ಯತ್ನ
ನಮ್ಮ ಕೆಲ ಶಾಸಕರು ಅಡ್ಡಮತದಾನ ಮಾಡುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಕಪ್ಪು ಚುಕ್ಕೆ ಇರಿಸುವ ಕೆಲಸ ಮಾಡಿದ್ದಾರೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ. ರಾಜ್ಯಾಧ್ಯಕ್ಷರು ಇದಕ್ಕಾಗಿಯೇ ಧರ್ಮಸ್ಥಳ ಮಂಜುನಾಥೇಶ್ವರನ ಸನ್ನಿಧಿಗೆ ತೆರಳಿ ಕೈ ಮುಗಿದು ಬಂದಿದ್ದಾರೆ. ಯಾರು ಅಡ್ಡ ಮತದಾನ ಮಾಡಿದ್ದಾರೋ ದೇವರು ಅವರಿಗೂ ಒಳ್ಳೆಯದು ಮಾಡಲಿ ಎಂದು ದೇವರ ಬಳಿ ಪ್ರಾರ್ಥನೆ ಮಾಡಿಕೊಂಡು ಬಂದಿದ್ದಾರೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು. ಅಡ್ಡ ಮತದಾನ ಘಟನೆಗೆ ಸಂಬಂಧಿಸಿ ಸಂಘಟನಾ ಚೌಕಟ್ಟಿನಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದರ ಕುರಿತು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರ ನೇತೃತ್ವದಲ್ಲಿ ವರದಿ ಸಲ್ಲಿಕೆಯಾಗಿದೆ. ಅದರ ಆಧಾರದ ಮೇಲೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ಅಡ್ಡ ಮತದಾನ ಮಾಡಿದವರ ಹೆಸರಿದೆಯೇ, ಆ ವರದಿಯಲ್ಲಿ ಯಾವ ಅಂಶಗಳಿವೆ ಎಂಬುದರ ಮಾಹಿತಿ ನನಗಿಲ್ಲ ಎಂದು ತಿಳಿಸಿದರು.

ವಿಮಾನ ಸೇವೆ ಮರು ಆರಂಭಕ್ಕೆ ಯತ್ನ

ಮುಂದಿನ ತಿಂಗಳು ಸಂಸತ್ ಅಧಿವೇಶನ ಆರಂಭವಾಗಲಿದೆ. ಆಗ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳ ಕಾರ್ಯಾಚರಣೆ ಮರು ಆರಂಭಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.
ಶಿವಮೊಗ್ಗ ಏರ್‌ಪೋರ್ಟ್‌ಗೆ ಸಂಬಂಧಿಸಿ ಎರಡು ರೀತಿಯ ಸಮಸ್ಯೆಗಳಿವೆ. ಒಂದು ವಿಮಾನ ನಿಲ್ದಾಣದಲ್ಲಿನ ಮೂಲ ಸೌಕರ್ಯದ ಸಮಸ್ಯೆ. ಮತ್ತೊಂದು ಏರ್‌ಲೈನ್ಸ್ ಸಂಸ್ಥೆಗಳ ಸಮಸ್ಯೆ. ಈ ಎರಡೂ ಸೇರಿ ಇಂದಿನ ಪರಿಸ್ಥಿತಿ ನಿರ್ಮಾಣವಾಗಿದೆ. ಉದಾಹರಣೆಗೆ ಸ್ಪೈಸ್‌ಜೆಟ್ ಸಂಸ್ಥೆಯ ಬಳಿ ಕಾರ್ಯಾಚರಣೆ ನಡೆಸಲು ಮೂರ‌್ನಾಲ್ಕು ವಿಮಾನಗಳಿವೆ. ಅದು ಅವರ ಸಮಸ್ಯೆ. ಇಂಡಿಗೋ ವಿಮಾನಯಾನಕ್ಕೆ ನೈಟ್‌ಲ್ಯಾಂಡಿಂಗ್ ತೊಂದರೆಯಿದೆ ಎಂದರು. ಬೆಂಗಳೂರು- ಶಿವಮೊಗ್ಗ ಮಾರ್ಗಕ್ಕೆ ಉಡಾನ್ ಯೋಜನೆಯಡಿ ಮತ್ತೆ ಟೆಂಡರ್ ಕರೆಯುವಂತೆ ಮನವಿ ಮಾಡಲಾಗಿದೆ. ಸಾಮಾನ್ಯವಾಗಿ ರಾಜಧಾನಿಗೆ ಉಡಾನ್ ವ್ಯವಸ್ಥೆ ಅನ್ವಯವಾಗುವುದಿಲ್ಲ. ಆದರೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಟೆಂಡರ್ ಆಹ್ವಾನಿಸಲು ಮನವಿ ಮಾಡಿದ್ದೇನೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಜವಾಬ್ದಾರಿಯಲ್ಲ

ಕೇಂದ್ರ ಸರ್ಕಾರದ ವೈಫಲ್ಯದಿಂದ ಶಿವಮೊಗ್ಗ ಏರ್‌ಪೋರ್ಟ್‌ಗೆ ದುಸ್ಥಿತಿ ಬಂದಿದೆ ಎಂಬ ಸ್ಥಳೀಯ ಕಾಂಗ್ರೆಸ್ ನಾಯಕರ ಆರೋಪವನ್ನು ರಾಘವೇಂದ್ರ ತಳ್ಳಿ ಹಾಕಿದರು. ಇದರಲ್ಲಿ ಕೇಂದ್ರದ ವೈಫಲ್ಯವೇನು ಎಂಬುದನ್ನು ಕಾಂಗ್ರೆಸ್‌ನವರು ಸ್ಪಷ್ಟವಾಗಿ ಹೇಳಲಿ. ನೈಟ್ ಲ್ಯಾಂಡಿಂಗ್ ಸೌಲಭ್ಯ ಇಲ್ಲದಿರುವುದು ಹಾಗೂ ವಿಸಿಬಿಲಿಟಿ ಸಮಸ್ಯೆಯಿಂದ ಮಂಜು ಕವಿದ ವಾತಾವರಣದಲ್ಲಿ ವಿಮಾನಗಳು ಲ್ಯಾಂಡಿಂಗ್ ಆಗದೇ ಮರಳಿವೆ. ಇದರಿಂದ ಆ ಸಂಸ್ಥೆಗಳಿಗೆ ನಷ್ಟವಾಗಿದೆ ಎಂದರು. ವಿಸಿಬಿಲಿಟಿ ಸಮಸ್ಯೆ ನಿವಾರಣೆಯಾಗಲಿ, ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಪೂರ್ಣಗೊಳ್ಳಲಿ. ನಂತರ ಶಾಶ್ವತವಾಗಿ ಸೇವೆ ಮುಂದುವರಿಸುತ್ತೇವೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ. ಈಗ ವಿಮಾನ ಸೇವೆ ಎರಡು-ಮೂರು ತಿಂಗಳ ಅವಧಿಗೆ ಸ್ಥಗಿತಗೊಂಡಿದೆ. ಇದೇನು ಶಾಶ್ವತವಲ್ಲ ಎಂದು ಹೇಳಿದರು. ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೆ ಅಗತ್ಯವಿದ್ದ ಸುಮಾರು ಭೂಮಿಯನ್ನು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೇ ಏರ್‌ಪೋರ್ಟ್ ಅಥಾರಿಟಿಗೆ ಹಸ್ತಾಂತರ ಮಾಡಲಾಗಿತ್ತು. ರಾಜ್ಯ ಸರ್ಕಾರ ಸುಮಾರು ಆರು ಕೋಟಿ ರೂ. ಅನುದಾನ ನೀಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಸಮಯಕ್ಕೆ ಪೂರ್ಣಗೊಳ್ಳಬೇಕಿದ್ದ ಕೆಲಸ ವಿಳಂಬವಾದ ಕಾರಣ ಜನರಿಗೆ ತಾತ್ಕಾಲಿಕ ತೊಂದರೆಯಾಗಿದೆ ಎಂದು ರಾಘವೇಂದ್ರ ತಿಳಿಸಿದರು.