ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ  
ಶಿವಮೊಗ್ಗ

ಇಂಡಿಗೋ ಏರ್‌ಲೈನ್ಸ್‌ ಸೇವೆ ಸ್ಥಗಿತಗೊಳ್ಳದಂತೆ ಸರ್ಕಾರಕ್ಕೆ ರಾಘವೇಂದ್ರ ಮನವಿ | Indigo Airlines

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರು-ಶಿವಮೊಗ್ಗ ನಡುವೆ ಸೇವೆ ಸ್ಥಗಿತಗೊಳ್ಳದಂತೆ ರಾಜ್ಯ ಸರ್ಕಾರ ಮನವಿ
  • ಸೇವೆ ಸ್ಥಗಿತಗೊಂಡಲ್ಲಿ 4-5 ಜಿಲ್ಲೆಗಳ ಜನರಿಗೆ ವಾಯು ಸಂಪರ್ಕದ ಅನಾನುಕೂಲ
  • ಸಚಿವ ಎಂ.ಬಿ.ಪಾಟೀಲರಿಗೆ ಮನವಿ ಮಾಡಿದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ
ಶಿವಮೊಗ್ಗ: ಮೇ 1ರಿಂದ ಇಂಡಿಗೋ ಏರ್‌ಲೈನ್ಸ್‌(Indigo Airlines)ನ ಬೆಂಗಳೂರು-ಶಿವಮೊಗ್ಗ ವಿಮಾನ ಸೇವೆ ಸ್ಥಗಿತಗೊಳ್ಳದಂತೆ ರಾಜ್ಯ ಸರ್ಕಾರ ತಕ್ಷಣವೇ ಸೂಕ್ತ ಕ್ರಮ ವಹಿಸಬೇಕೆಂದು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರಿಗೆ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ.
ಬೆಂಗಳೂರು ಮತ್ತು ಶಿವಮೊಗ್ಗ ಮಾರ್ಗದ ವಿಮಾನಯಾನ(Aviation) ಸೇವೆ ಯಶಸ್ವಿಯಾಗಿ ನಡೆಯುತ್ತಿದ್ದು, ಸೇವೆ ಸ್ಥಗಿತಗೊಂಡಲ್ಲಿ ಶಿವಮೊಗ್ಗ, ಹಾವೇರಿ, ದಾವಣಗೆರೆ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಲಕ್ಷಾಂತರ ಜನರಿಗೆ ವಾಯು ಸಂಪರ್ಕದ ಅನುಕೂಲ ತಪ್ಪಲಿದೆ. ಇದು ಮಲೆನಾಡು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಆರ್ಥಿಕತೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದಿದ್ದಾರೆ.
ಸುಮಾರು 450 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶಿವಮೊಗ್ಗ ವಿಮಾನ ನಿಲ್ದಾಣ(Shimogga Airport) ಪ್ರಧಾನಮಂತ್ರಿಗಳಿಂದ ಲೋಕಾರ್ಪಣೆಗೊಂಡ ನಂತರ ಎರಡು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ 2,400ಕ್ಕೂ ಹೆಚ್ಚು ವಿಮಾನ ಯಾನಗಳನ್ನು ನಿರ್ವಹಿಸಿದ್ದು, 1 ಲಕ್ಷಕ್ಕೂ ಅಧಿಕ ಪ್ರಯಾಣಿಕರಿಗೆ ಸೇವೆ ಸಲ್ಲಿಸಿದೆ ಎನ್ನುವುದು ಈ ವಿಮಾನ ನಿಲ್ದಾಣದ ಕಾರ್ಯಸಾಧ್ಯತೆ ಮತ್ತು ಹೂಡಿಕೆಯ ಯಶಸ್ಸು ಹಾಗೂ ಸದೃಢತೆಯನ್ನು ಸ್ಪಷ್ಟವಾಗಿ ಪ್ರದರ್ಶಿಸಿದೆ ಎಂದು  ತಿಳಿಸಿದ್ದಾರೆ. 
ಪ್ರಸಕ್ತ ಹೊಸ ಹಾರಾಟ ಕರ್ತವ್ಯ ಸಮಯ ಮಿತಿ (ಎಫ್‌ಡಿಟಿಎಲ್) ನಿಯಮಗಳಿಂದ ಉಂಟಾಗಿರುವ ಪೈಲಟ್ ಕೊರತೆ ಹಾಗೂ ನವೀಕರಿಸದ ಏರ್ ಲೈನ್ ಒಪ್ಪಂದ(Airline contract)ದ ಕಾರಣಗಳನ್ನು ಮುಂದಿಟ್ಟು ಇಂಡಿಗೋ ಸಂಸ್ಥೆ ಈ ಮಾರ್ಗವನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಐಐಡಿಸಿ) ಮತ್ತು ಇಂಡಿಗೋ ನಡುವಿನ ಮೂಲ ಒಪ್ಪಂದ ಆಗಸ್ಟ್ 2025ರಲ್ಲಿ ಮುಕ್ತಾಯವಾಗಿದ್ದು, ನಂತರವೂ ಕೂಡ ಇಂಡಿಗೋ ಸಂಸ್ಥೆ ಆರು ತಿಂಗಳ ಕಾಲ ಈ ಮಾರ್ಗದಲ್ಲಿ ವಿಮಾನಯಾನ ಮುಂದುವರಿಸಿತ್ತು. ಬದಲಾದ ಪರಿಸ್ಥಿತಿಗಳ ಹಿನ್ನಲೆಯಲ್ಲಿ ಜನರ ಅನುಕೂಲದ ದೃಷ್ಟಿಯಿಂದ ರಾಜ್ಯ ಸರ್ಕಾರ ತುತ್ತಾಗಿ ಇಂಡಿಗೋ ಸಂಸ್ಥೆಯವರೊಂದಿಗೆ ಮಾತನಾಡಿ ಒಪ್ಪಂದ ನವೀಕರಿಸುವ ನಿಟ್ಟಿನಲ್ಲಿ ಅಗತ್ಯ, ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ವಿನಂತಿಸಿಕೊಂಡಿದ್ದಾರೆ.

ರಾಜ್ಯ ಸರ್ಕಾರಕ್ಕೆ 5 ಮನವಿ

ಮೇ 1ರ ನಂತರವೂ ವಿಮಾನ ಸೇವೆ ಮುಂದುವರಿಯುವಂತೆ ಇಂಡಿಗೋ ಜತೆ ತಕ್ಷಣ ಸಂಧಾನ ನಡೆಸಬೇಕು.   ಇಂಧನ ವೆಚ್ಚ ಮತ್ತು ಮಾರ್ಗ ದಟ್ಟಣೆ ಆಧಾರದ ಮೇಲೆ ಹಣಕಾಸು ಬೆಂಬಲ ಒಳಗೊಂಡ ಹೊಸ ಒಪ್ಪಂದ ರೂಪಿಸಬೇಕು. ಕನಿಷ್ಠ ಮುಂದಿನ ಎರಡು ವರ್ಷಗಳ ಅವಧಿಗೆ ಹಾಲಿ ಒಪ್ಪಂದ ನವೀಕರಿಸಬೇಕು. ಒಂದು ವೇಳೆ ಇಂಡಿಗೋ ಸಂಸ್ಥೆ ಹಿಂದೆ ಸರಿದರೆ ಬದಲಿ ಏರ್‌ಲೈನ್ ಸಂಸ್ಥೆಗಳ ಸೇವೆ ನಿಯೋಜಿಸಬೇಕು ಹಾಗೂ ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಹಣಕಾಸು ಹೊರೆ ಕಡಿಮೆ ಮಾಡಿಕೊಳ್ಳುವ ಸಾಧ್ಯತೆಗಳನ್ನು ರಾಜ್ಯ ಸರ್ಕಾರ ಪರಿಶೀಲಿಸಬೇಕು ಎಂದು ಬಿ.ವೈ.ರಾಘವೇಂದ್ರ ಒತ್ತಾಯಿಸಿದ್ದಾರೆ. 
"

ನೈಟ್ ಲ್ಯಾಂಡಿಂಗ್ ಸೌಲಭ್ಯದಿಂದ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉನ್ನತೀಕರಿಸಲಾಗುತ್ತಿರುವ ಹೊತ್ತಿನಲ್ಲೇ ವಿಮಾನ ಸೇವೆ ನಿಲ್ಲುವುದು ಸಾರ್ವಜನಿಕರಿಗೆ ಅನುಕೂಲ ತಪ್ಪಿಸಿದಂತಾಗುತ್ತದೆ. ರಾತ್ರಿ ಇಳಿಯುವಿಕೆ ಸೌಲಭ್ಯದ ಸಂಪೂರ್ಣ ಪ್ರಯೋಜನ, ಹೆಚ್ಚಿನ ಸೇವೆಗಳನ್ನು ಜನರಿಗೆ ತಲುಪಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯೂ ಆಗಿದೆ ಮತ್ತು ಹೂಡಿಕೆಗೆ ನ್ಯಾಯ ಒದಗಿಸಿದಂತಾಗುತ್ತದೆ.