ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ 
ಶಿವಮೊಗ್ಗ

ಸ್ವಹಿತಾಸಕ್ತಿ ಬದಿಗಿರಿಸಿ ರೋಗಿಗಳ ಆರೋಗ್ಯ ಕಾಪಾಡಿ | U.T.Khadar Meeting

ಪ್ರಮುಖ ಮುಖ್ಯಾಂಶಗಳು

  • ವೈದ್ಯಾಧಿಕಾರಿಗಳು ಹಾಗೂ ತಂತ್ರಜ್ಞರೊಂದಿಗೆ ಸಭೆ
  • ಖಾಲಿ ಹುದ್ದೆಗಳ ಭರ್ತಿ ಸರ್ಕಾರ ನೋಡಿಕೊಳ್ಳಲಿದೆ
  • ಆರೋಗ್ಯ ಸಚಿವ ಯು.ಟಿ.ಖಾದರ್ ವೈದ್ಯರಿಗೆ ಸೂಚನೆ
ಶಿವಮೊಗ್ಗ: ವೈದ್ಯರು ಸ್ವಹಿತಾಸಕ್ತಿಗಳನ್ನು ಬದಿಗಿರಿಸಿ ಆಸ್ಪತ್ರೆಗಳಿಗೆ ಬರುವ, ಒಳರೋಗಿಗಳಾಗಿ ದಾಖಲಾಗುವ ರೋಗಿಗಳ ಆರೋಗ್ಯವನ್ನು ಮೊದಲು ಕಾಪಾಡಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್(Health and Family Welfare Minister U.T.Khader) ವೈದ್ಯರಿಗೆ ಸೂಚಿಸಿದರು. 
ಜಿಲ್ಲಾ ಪಂಚಾಯಿತಿ ಸಭಾಂಗಣ(Zilla Panchayat Hall)ದಲ್ಲಿ ಶನಿವಾರ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ತಂತ್ರಜ್ಞರೊಂದಿಗೆ ಸಭೆ ನಡೆಸಿದ ಅವರು, ರಾಜ್ಯದಲ್ಲಿ ವೈದ್ಯರ ಕೊರತೆ ಇದೆ. ಖಾಲಿ ಹುದ್ದೆಗಳ ಭರ್ತಿ ಮಾಡುವುದನ್ನು ಸರ್ಕಾರ ನೋಡಿಕೊಳ್ಳಲಿದೆ ಎಂದರು. 
ಜಿಲ್ಲೆಯ ಪಿಎಚ್‌ಸಿ(PHC)ಗಳಲ್ಲಿ ಖಾಲಿ ಇರುವ ವೈದ್ಯಾಧಿಕಾರಿಗಳ ಹುದ್ದೆಗೆ ಅರ್ಹ ವೈದ್ಯರನ್ನು ನೇಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಗುತ್ತಿಗೆ ಆಧಾರದ ಮೇಲೆ ಸೇವೆಗೆ ಮುಂದಾಗಿ ಅರ್ಜಿ ಸಲ್ಲಿಸುವ ಅರ್ಹ ವೈದ್ಯರ ಅರ್ಜಿಗಳನ್ನು ಕೂಡಲೇ ಪರಿಶೀಲಿಸಿ, ಮೂರು ದಿನಗಳೊಳಗೆ ನೇಮಕಾತಿ ಆದೇಶ ನೀಡಲಾಗುವುದು. ಮಲೆನಾಡು, ಗುಡ್ಡಗಾಡು, ಗಡಿ, ಕಾಡಿನ ಮದ್ಯದ ಪ್ರದೇಶಗಳು ಸೇರಿ ನಗರದಿಂದ ದೂರದ ಪ್ರದೇಶದಲ್ಲಿದ್ದು, ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿ(Medical staff)ಗಳಿಗೆ ವಿಶೇಷ ವೇತನ ಭತ್ಯೆಗಳನ್ನು ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. 
ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ವೈದ್ಯರು(Doctor), ಎಎನ್‌ಎಂ, ಫಾರ್ಮಸಿಸ್ಟ್, ನರ್ಸ್, ಲ್ಯಾಬ್ ಟೆಕ್ನೀಷಿಯನ್ಸ್(Lab Technicians), ಡಿ ಗ್ರೂಪ್ ನೌಕರರ ನೇಮಕಾತಿಗೆ ಮೊದಲ ಆದ್ಯತೆ ನೀಡಿದ್ದು, ಶೀಘ್ರವೇ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುವುದು. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶೀಘ್ರದಲ್ಲಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ರಿಲಾಕ್ಸ್ ಮೂಡಿನಿಂದ ಹೊರಗೆ ಬನ್ನಿ

ಜಿಲ್ಲಾ ಮಟ್ಟದ ಅಧಿಕಾರಿಗಳು(District level officials) ರಿಲಾಕ್ಸ್ ಮೂಡಿನಿಂದ ಹೊರಬರಬೇಕು. ಆರೋಗ್ಯ ಇಲಾಖೆಯಲ್ಲಿ 38 ಯೋಜನೆಗಳಿವೆ. ಅವುಗಳ ಬಗ್ಗೆ ಕೆಳಹಂತದ ವೈದ್ಯರಿಗೆ ಮಾಹಿತಿ ನೀಡದೇ ಇದ್ದರೆ ಏನು ಪ್ರಯೋಜನ ಎಂದು ಸಚಿವ ಖಾದರ್ ಖಾರವಾಗಿ ಪ್ರಶ್ನಿಸಿದರು. ನಿವೃತ್ತಿ ಸಮಯ ಬಂದಿದೆ ಎಂದು ಆರಾಮಾಗಿ ಕೆಲಸ ಮಾಡಬೇಡಿ. ನಿಮ್ಮದು ಡಬಲ್ ಜವಾಬ್ದಾರಿ ಇದೆ. ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದು ತರಾಟೆಗೆ ತೆಗೆದುಕೊಂಡರು. ಮಕ್ಕಳಿಗೆ ಅಪೌಷ್ಟಿಕತೆ ನಿವಾರಣೆ( Malnutrition Prevention)ಗೆ ಯಾವೆಲ್ಲ ಆಹಾರ ನೀಡಲಾಗುತ್ತಿದೆ ಎಂಬ ಪ್ರಶ್ನೆಗೆ ತಡಬಡಾಯಿಸಿದ ಅಧಿಕಾರಿ ವಿರುದ್ಧ ಗರಂ ಆದರು. ಇದೇ ವೇಳೆ ಪಿಎಚ್‌ಸಿಗಳಲ್ಲಿ ಮನೋಚೈತನ್ಯದ ಬಗ್ಗೆ ಅರಿವು ಮೂಡಿಸಲು ವಾರ್ಷಿಕ 80 ಲಕ್ಷ ರೂ. ಬಿಡುಗಡೆ ಆಗುತ್ತಿದೆ. ಅದನ್ನೆಲ್ಲಾ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.