ಶಿವಮೊಗ್ಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರನ್ನು ಗೌರವಿಸಲಾಯಿತು. ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಡಾ. ಆರ್.ಸಿ.ಜಗದೀಶ, ರುದ್ರಮುನಿ ಸಜ್ಜನ್, ಪ್ರೊ. ಕಿರಣ ದೇಸಾಯಿ, ಎಚ್.ಎನ್.ಮಹಾರುದ್ರ ಇದ್ದರು. 
ಶಿವಮೊಗ್ಗ

ವಚನಗಳ ಪಾಲನೆಯಿಂದ ಮನೋಶುದ್ಧಿ I follow vachanas

ಪ್ರಮುಖ ಮುಖ್ಯಾಂಶಗಳು

  • ಶಿವಶರಣರ ವಚನಗಳನ್ನು ಜೀವನದಲ್ಲಿ ಅಳವಡಿಕೆ ಅವಶ್ಯ
  • ಪಂಚಮ ಶಿವಲಿಂಗೇಶ್ವರ ಶ್ರೀ ಹೇಳಿಕೆ
  • ಶರಣ ಸಾಹಿತ್ಯ ಸಮ್ಮೇಳನ ಸಮಾರೋಪ
ಶಿವಮೊಗ್ಗ: ಶರಣ (sharana) ಸಾಹಿತ್ಯ (sahitya) ವನ್ನು ಅಧ್ಯಯನ ಮಾಡಿಕೊಂಡು ನಮ್ಮ ಬದುಕನ್ನು ಬದಲಿಸಿಕೊಳ್ಳಬೇಕು. ನಮ್ಮ ಮಾತು ಹಾಗೂ ಕೃತಿ ಎರಡೂ ಒಂದೇ ಆಗಿರಬೇಕು ಎಂದು ನಿಡಸೋಸಿ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠ (mutt) ದ ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಜಿಲ್ಲಾ ಮಟ್ಟದ ಶರಣ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಯಾವುದೇ ಆಚರಣೆಯಲ್ಲಿ ಧರ್ಮ ಇರಬೇಕು. ಮಾತೆಯರು ತಮ್ಮ ಮಕ್ಕಳಿಗೆ ವರ್ಷಕ್ಕೆ ಕನಿಷ್ಠ 10 ವಚನಗಳನ್ನು ಕಲಿಸಿದರೂ ಸಾಕು. ಭವಿಷ್ಯದಲ್ಲಿ ಆ ಮಕ್ಕಳ ಬದುಕು ಹಸನಾಗುತ್ತದೆ. ಮಕ್ಕಳು ಧರ್ಮದ ಹಾದಿಯಲ್ಲಿ ಸಾಗುತ್ತಾರೆ ಎಂದರು.
ಎರಡು ದಿನಗಳ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಸಾಕಷ್ಟು ಉತ್ತಮ ವಿಚಾರಗಳನ್ನು ಕೇಳಿದ್ದೇವೆ. ಆದರೆ ಅದನ್ನು ಬದುಕಿಗೂ ಅಳವಡಿಸಿಕೊಳ್ಳಬೇಕು. ಇಲ್ಲಿ ಕೇಳಿದ್ದನ್ನು ಇಲ್ಲಿಯೇ ಬಿಟ್ಟು ಹೋಗುವ ಮನಸ್ಥಿತಿ ಒಳ್ಳೆಯದಲ್ಲ. ಕೇವಲ ಪ್ರಶ್ನೋತ್ತರಗಳಲ್ಲೇ ಕಾಲಹರಣ ಮಾಡದೆ ವಾಸ್ತವ ಸಂಗತಿಯನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಸಾಮಾನ್ಯ ಕೌಟುಂಬಿಕ ಹಿನ್ನೆಲೆಯಿಂದ ಬಂದ ಶ್ರಮಜೀವಿ ಮಹಿಳೆಯರು ಲಿಂಗಪೂಜೆ ಮಾಡಿಕೊಂಡು, ವಚನಗಳ ಸಾರಗಳನ್ನು ನಿತ್ಯದ ಬದುಕಿಗೆ ಅಳವಡಿಸಿಕೊಂಡು ಶರಣೆಯರಾಗಿ ರೂಪುಗೊಂಡ ಅನೇಕ ನಿದರ್ಶನಗಳು ನಮ್ಮ ಮುಂದಿವೆ. ಅದು ನಮಗೂ ಮಾದರಿ ಆಗಬೇಕು ಎಂದು ಹೇಳಿದರು.
ಸಮ್ಮೇಳನದ ಸರ್ವಾಧ್ಯಕ್ಷರಾದ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರನ್ನು ಶರಣ ಸಾಹಿತ್ಯ ಪರಿಷತ್, ಬಸವಕೇಂದ್ರ, ಅಕ್ಕನ ಬಳಗದ ವತಿಯಿಂದ ಗೌರವಿಸಲಾಯಿತು. ಶಿವಮೊಗ್ಗ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್.ಮಹಾರುದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಉಪಸ್ಥಿತರಿದ್ದರು.

ಸಾಮಾನ್ಯರ ನಡುವೆ ಬೆಳೆದ ಸಾಹಿತ್ಯ

ಸಾಮಾನ್ಯ ಜನರ ನಡುವೆ ಬೆಳೆದಿದ್ದು ಶರಣ ಸಾಹಿತ್ಯ. ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವುದು ಶರಣ ಸಾಹಿತ್ಯದ ವಿಶೇಷ. ವಿಶ್ವದ ಬೇರೆ ಯಾವುದೇ ಭಾಷೆಯಲ್ಲೂ ಇಂತಹ ಸಾಹಿತ್ಯ ಪ್ರಕಾರವೊಂದು ಇಲ್ಲ ಎಂಬುದು ಗಮನಿಸಬೇಕಾದ ಸಂಗತಿ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ ಹೇಳಿದರು. 12ನೇ ಶತಮಾನದ ಜೀವನಶೈಲಿಗೂ ಇಂದಿನ ಸನ್ನಿವೇಶಕ್ಕೂ ಇರುವ ವ್ಯತ್ಯಾಸವನ್ನು ಅರಿಯಲು ವಚನ ಸಾಹಿತ್ಯ ಪೂರಕವಾಗಿದೆ. ಇಂದು ನಾವು ಕಾಯಕ ಸಂಸ್ಕೃತಿಯಿಂದ ದೂರವಾಗುತ್ತಿದ್ದೇವೆ. ಶರಣ ಸಾಹಿತ್ಯ ಅಧ್ಯಯನ ಇಂದಿನ ಅನಿವಾರ್ಯತೆಯಾಗಿದೆ. ವಚನಗಳಲ್ಲಿ ಸ್ಪಷ್ಟತೆಯಿದೆ. ಎಲ್ಲ ಸಮಸ್ಯೆಗಳಿಗೆ ಪರಿಹಾರವಿದೆ. ನಮ್ಮ ಆಹಾರ, ಜೀವನ ಪದ್ಧತಿ, ಆಲೋಚನೆ ಹೇಗಿರಬೇಕು ಎಂಬುದರ ಉಲ್ಲೇಖ ಶರಣ ಸಾಹಿತ್ಯದಲ್ಲಿದೆ ಎಂದರು.


ವಿವಿಯಲ್ಲಿ ಶರಣರು

ಕೆಳದಿ ಶಿವಪ್ಪನಾಯಕನ ಹೆಸರಿನಲ್ಲಿ ಕೃಷಿ ಹಾಗೂ ತೋಟಗಾರಿಕೆ ವಿವಿ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಇದೇ ವಿವಿಯಲ್ಲಿ ಶಿವಪ್ಪನಾಯಕನ ಹೆಸರಿನಲ್ಲಿ ಮಣ್ಣು ಪರೀಕ್ಷಾ ಕೇಂದ್ರ ಆರಂಭಿಸಲಾಗುವುದು. ವೀರರಾಣಿ ಕೆಳದಿ ಚನ್ನಮ್ಮನ ಹೆಸರಿನಲ್ಲಿ ಅಧ್ಯಯನ ಪೀಠವನ್ನು ಆರಂಭಿಸಲಾಗುತ್ತದೆ ಎಂದು ಡಾ. ಆರ್.ಸಿ.ಜಗದೀಶ ತಿಳಿಸಿದರು.

ಅಲ್ಲಮ-ಅಕ್ಕನ ಪ್ರತಿಮೆ

ಹಳೇ ಜೈಲು ಆವರಣಕ್ಕೆ ಬೇರೆ ಯಾವುದೋ ಹೆಸರು ನಾಮಕರಣ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಎಲ್ಲ ಪ್ರಯತ್ನಗಳ ನಂತರ ಅದಕ್ಕೆ ಅಲ್ಲಮಪ್ರಭುವಿನ ಹೆಸರು ನಾಮಕರಣ ಮಾಡಲಾಗಿದೆ. ಅಲ್ಲಿ ಅಲ್ಲಮನ ಪ್ರತಿಮೆ ಸ್ಥಾಪನೆ ಮಾಡಬೇಕು. ಸವಳಂಗ ರಸ್ತೆಯ ವೃತ್ತವೊಂದಕ್ಕೆ ಅಕ್ಕಮಹಾದೇವಿ ಹೆಸರು ನಾಮಕರಣ ಮಾಡಲಾಗಿದೆ. ಅಲ್ಲಿ ಅಕ್ಕನ ಪ್ರತಿಮೆ ಸ್ಥಾಪನೆಗೆ ಅನುದಾನ ಬಂದಿದ್ದು ಶೀಘ್ರದಲ್ಲೇ ಆ ಕಾರ್ಯ ಕೈಗೂಡಲಿದೆ ಎಂದು ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಎನ್. ಸಜ್ಜನ್ ಹೇಳಿದರು.

ಮಕ್ಕಳನ್ನು ಕರೆತರಬೇಕು

ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ವಯಸ್ಸು ಆಗಿರುವವರೇ ಇರುತ್ತಾರೆ. ಬೆಕ್ಕಿನ ಕಲ್ಮಠ ಹಾಗೂ ಬಸವಕೇಂದ್ರಗಳಲ್ಲಿ ನಡೆಯುವ ವಿಶೇಷ ಉಪನ್ಯಾಸ ಕಾರ್ಯಕ್ರಮಗಳಲ್ಲೂ ಕಿರಿಯರು ಕಾಣುವುದೇ ಇಲ್ಲ. ಅದೂ ಸಮಯಕ್ಕೆ ಸರಿಯಾಗಿ ಯಾರೂ ಬರುವುದಿಲ್ಲ. ಕಾರ್ಯಕ್ರಮ ಮುಗಿಯುವ ವೇಳೆಗೆ ಸಭಾಂಗಣ ಭರ್ತಿಯಾಗಿರುತ್ತದೆ. ಓರ್ವ ಸಂಘಟಕನಾಗಿ ಈ ಬಗ್ಗೆ ನನಗೆ ಬೇಸರವಿದೆ. ಉತ್ತಮ ವಿಚಾರಗಳನ್ನು ತಿಳಿಸುವ ಕಾರ್ಯಕ್ರಮಗಳಿಗೆ ಜನರು ಸರಿಯಾದ ಸಮಯಕ್ಕೆ ಬರಬೇಕು. ತಮ್ಮೊಂದಿಗೆ ಮಕ್ಕಳನ್ನೂ ಕರೆತರಬೇಕು ಎಂದು ರುದ್ರಮುನಿ ಸಜ್ಜನ್ ಸಲಹೆ ನೀಡಿದರು.