ಶಿವಮೊಗ್ಗದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಪೂರ್ವ ಸಂಚಾರ ಪೊಲೀಸ್ ಠಾಣೆ ನಿವೃತ್ತ ಎಎಸ್‌ಐ ರಾಜಕುಮಾರ ಅವರು ಪೊಲೀಸ್ ಧ್ವಜವನ್ನು ಬಿಡುಗಡೆಗೊಳಿಸಿದರು. ಬಿ.ನಿಖಿಲ್, ಎ.ಜಿ.ಕಾರಿಯಪ್ಪ ಇದ್ದರು.
- ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ
- ಪೊಲೀಸ್ ಇಲಾಖೆಗೆ ಏ.2 ಮತ್ತು ಅ.21 ವಿಶೇಷ ದಿನಗಳು
- ಮುಖ್ಯಮಂತ್ರಿ ಪದಕ ಪುರಸ್ಕೃತ ನಿವೃತ್ತ ಎಎಸ್‌ಐ ರಾಜಕುಮಾರ್ ಹೇಳಿಕೆ
ಶಿವಮೊಗ್ಗ: ಕರ್ತವ್ಯದಲ್ಲಿ ಸಮಯ ಪ್ರಜ್ಞೆ ಮತ್ತು ನಿಷ್ಠೆ ಇರಬೇಕು. ಇದರಿಂದ ಪೊಲೀಸ್ ಇಲಾಖೆಗೆ ಉತ್ತಮ ಹೆಸರು ಬರುವುದರೊಂದಿಗೆ ಪ್ರಶಂಸೆ, ಆತ್ಮತೃಪ್ತಿ ಲಭಿಸುತ್ತದೆ ಎಂದು ಮುಖ್ಯಮಂತ್ರಿ ಪದಕ(Chief Minister's Medal) ಪುರಸ್ಕೃತ ನಿವೃತ್ತ ಎಎಸ್‌ಐ ರಾಜಕುಮಾರ್ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ಪೊಲೀಸ್ ಧ್ವಜ ದಿನಾಚರಣೆ(Police Flag Day) ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಕಾನೂನು ಸುವ್ಯವಸ್ಥೆಗಾಗಿ ಹಗಲಿರುಳು ದುಡಿಯುವ ಪೊಲೀಸ್ ಪಡೆಯ ಕರ್ತವ್ಯ ಸೇವೆ ನೆನೆಯುವ ದಿನ ಇದಾಗಿದೆ ಎಂದರು.
ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಸೇವೆ ಗುರುತಿಸಿ ಪ್ರತಿವರ್ಷ ಏ.2ರಂದು ಮುಖ್ಯಮಂತ್ರಿಗಳ ಪದಕ ಪಡೆದವರನ್ನು ಹಾಗೂ ಕರ್ತವ್ಯನಿರತವಾಗಿದ್ದಾಗ ನಿಧನರಾದವರನ್ನು ಸ್ಮರಿಸಲು ಅ.21ರಂದು ಹುತಾತ್ಮರ ದಿನ ಆಚರಿಸಲಾಗುತ್ತಿದೆ. ಪೊಲೀಸ್ ಇಲಾಖೆಗೆ ಇವೆರೆಡು ದಿನಗಳು ವಿಶೇಷ ಸಂದರ್ಭ ಎಂದು ಹೇಳಿದರು.
ಜಿಲ್ಲೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿ ಶಾಂತಿ ಸ್ಥಾಪನೆಗೆ ಕೊಡುಗೆ ನೀಡಿರುವ ಪೊಲೀಸ್ ಪಡೆಗೆ ನನ್ನ ಅಭಿನಂದನೆಗಳು. ದಕ್ಷತೆ, ಸಮಯ ಪ್ರಜ್ಞೆಯಿಂದ ದುಡಿದ ಪೊಲೀಸ್ ನೌಕರರ ಕುಂದುಕೊರತೆಗಳನ್ನು ಆಲಿಸಿ ಭದ್ರತೆ ಒದಗಿಸುವಂತೆ ಮನವಿ ಮಾಡಿದರು.
70ವರ್ಷ ಮೇಲ್ಪಟ್ಟ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. 2013ರಲ್ಲಿ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದ ನಿವೃತ್ತ ಎಎಸ್‌ಐ ರಾಜಕುಮಾರ ಅವರನ್ನು ಗೌರವಿಸಲಾಯಿತು. ಎಎಸ್ಪಿ ಎ.ಜಿ.ಕಾರಿಯಪ್ಪ ಮುಂತಾದವರಿದ್ದರು.
ಕ್ಷೇಮಾಭಿವೃದ್ಧಿ ನಿಧಿಗೆ ಶೇ.50 ಹಣ ಬಳಕೆ
ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಗಾಗಿಯೇ ನಿವೃತ್ತ ಪೊಲೀಸ್ ಕಲ್ಯಾಣ ನಿಧಿ(Welfare fund) ಸ್ಥಾಪಿಸಲಾಗಿದೆ. 2025ರಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ 26,96,870 ರೂ. ಸಂಗ್ರಹ ಮಾಡಲಾಗಿದೆ. ಅದರಲ್ಲಿ ಶೇ.50ರಷ್ಟನ್ನು ಕೇಂದ್ರ ಕಲ್ಯಾಣ ನಿಧಿಗೆ ಜಮೆ ಮಾಡಲಾಗಿದೆ ಎಂದು ಎಸ್‌ಪಿ ಬಿ.ನಿಖಿಲ್ ಹೇಳಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪೊಲೀಸ್ ಧ್ವಜ ದಿನದ ಪ್ರಯುಕ್ತ ಪೊಲೀಸ್ ಅಧಿಕಾರಿಗಳಿಗೆ, ಆಹ್ವಾನಿತ ಉನ್ನತ ಅಧಿಕಾರಿಗಳಿಗೆ, ಗಣ್ಯರಿಗೆ ಮತ್ತು ಸಾರ್ವಜನಿಕರಿಗೆ ಧ್ವಜಗಳನ್ನು ಮಾರಾಟ ಮಾಡಿ ಅದರಿಂದ ಸಂಗ್ರಹವಾದ ಹಣದಲ್ಲಿ ಶೇ.50ರಷ್ಟು ನಿವೃತ್ತ ಕ್ಷೇಮಾಭಿವೃದ್ಧಿ ನಿಧಿಗೆ ಮತ್ತು ಶೇ.50ರಷ್ಟು ಕೇಂದ್ರ ಕಲ್ಯಾಣ ನಿಧಿಗೆ ಜಮಾ ಮಾಡಲಾಗುವುದು ಎಂದರು.