ಸೊರಬ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಸಮನ್ವಯ ಸಮಿತಿ ಸಭೆಯಲ್ಲಿ ತಹಸೀಲ್ದಾರ್ ಕೆ.ಪುರಂದರ, ಇಒ ಆರ್.ಶಶಿಧರ್, ಪುರಸಭಾ ಮುಖ್ಯಾಧಿಕಾರಿ ಚಂದನ್ ಇದ್ದರು. 
ಶಿವಮೊಗ್ಗ

28ರಿಂದ ಪಲ್ಸ್ ಪೋಲಿಯೋ ಅಭಿಯಾನ | health department

ಶಿವಕುಮಾರ ಎಸ್.ಪಿ.
ಸೊರಬ: ಭಾರತವನ್ನು ಪೋಲಿಯೋಮುಕ್ತ ಮಾಡುವಲ್ಲಿ ಪ್ರತಿಯೊಬ್ಬ ನಾಗರಿನ ಸಹಕಾರ ಅಗತ್ಯ. ಜೂ.28ರಿಂದ 30ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲ ಅಧಿಕಾರಿಗಳು ಕೈಜೋಡಿಸಬೇಕು ಎಂದು ತಹಸೀಲ್ದಾರ್ ಕೆ.ಪುರಂದರ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಅಂತರ್ ಇಲಾಖೆ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.
ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಹನಿಯನ್ನು ತಪ್ಪದೆ ಹಾಕಿಸುವಂತೆ ಪಾಲಕರಿಗೆ ತಿಳಿಸಬೇಕು. ಪೋಲಿಯೋ ಹನಿ ಹಾಕುವ ದಿನದಂದು ಗೊತ್ತುಪಡಿಸಿದ ಇಲಾಖೆ ಸಿಬ್ಬಂದಿ ಮತ್ತು ವಾಹನಗಳು ಹಾಜರಿರಬೇಕು. ಪೋಲಿಯೋ ಹನಿಯನ್ನು ಕೋಲ್ಡ್ ಬಾಕ್ಸ್‌ನಲ್ಲಿ ಸಂಗ್ರಹಿಸಿಡಲು ವಿದ್ಯುತ್ ಅಗತ್ಯ. ಹಾಗಾಗಿ ಮೆಸ್ಕಾಂ ಅಧಿಕಾರಿಗಳು ದಿನದ 24 ತಾಸು ವಿದ್ಯುತ್ ಸರಬರಾಜು ಮಾಡಬೇಕು ಎಂದು ತಿಳಿಸಿದರು.
ತಾಲೂಕು ಮಟ್ಟದ ಪೋಲಿಯೋ ಬೂತ್‌ಗಳಲ್ಲಿ ಅಧಿಕಾರಿಗಳು ಇರುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಜತೆ ಸ್ಥಳೀಯ ಮಟ್ಟದ ಬೂತ್‌ಗಳಲ್ಲಿಯೂ ಅಧಿಕಾರಿಗಳು ಇರಬೇಕು. ಕಾರ್ಯಕ್ರಮದ ಮೇಲುಸ್ತುವಾರಿ ನೋಡಿಕೊಳ್ಳಬೇಕು. ಯಾವುದೇ ಮಗು ಪೋಲಿಯೋ ಹನಿಯಿಂದ ವಂಚಿತ ಆಗಬಾರದು ಎಂದರು.
ತಾಲೂಕು ಆರೋಗ್ಯಾಧಿಕಾರಿ ಶ್ರೀಹರ್ಷ ಮಾತನಾಡಿ, ಪಲ್ಸ್ ಪೋಲಿಯೋ ಅಭಿಯಾನಕ್ಕೆ ಎಲ್ಲ ಸಿದ್ಧತೆ ನಡೆದಿದೆ. ತಾಲೂಕಿನಲ್ಲಿ ಐದು ವರ್ಷದೊಳಗಿನ 14,508 ಮಕ್ಕಳಿದ್ದಾರೆ. 108 ಬೂತ್‌ಗಳಲ್ಲಿ ಹನಿ ಹಾಕಲಾಗುವುದು. ಸೊರಬ ಪಟ್ಟಣದ ಖಾಸಗಿ ಬಸ್ ನಿಲ್ದಾಣ, ಆನವಟ್ಟಿ ಖಾಸಗಿ ಬಸ್ ನಿಲ್ದಾಣ, ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನದ ಆವರಣ ಹೀಗೆ ಮೂರು ಟ್ರಾನ್ಸ್‌ಲೆಟ್ ಬೂತ್‌ಗಳನ್ನು ಒಳಗೊಂಡಂತೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ತಾಪಂ ಇಒ ಆರ್.ಶಶಿಧರ್, ಪುರಸಭಾ ಮುಖ್ಯಾಧಿಕಾರಿ ಚಂದನ್, ಸಮಾಜ ಕಲ್ಯಾಣಾಧಿಕಾರಿ ಇಕ್ಬಾಲ್ ಜಾತಿಗೇರ್, ಮೆಸ್ಕಾಂ ಎಇಇ ಸತ್ಯಪ್ರಕಾಶ್, ಕೃಷಿ ತಾಂತ್ರಿಕ ಅಧಿಕಾರಿ ಕಾಂತರಾಜ್, ಯೋಗೇಶ್ ಇತರರಿದ್ದರು.