ಭದ್ರಾವತಿ ವಾರ್ಡ್‌ವೊಂದರಲ್ಲಿ ಕಸ ಬಿಸಾಡುತ್ತಿದ್ದ ಜಾಗವನ್ನು ಎನ್.ಗೋವಿಂದ ನೇತೃತ್ವದ ಪೌರ ಕಾರ್ಮಿಕರ ತಂಡ ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ, ಗಿಡ ನೆಟ್ಟಿರುವುದು.
ಭದ್ರಾವತಿ: ನಗರದಲ್ಲಿ ಕಸ ಸಂಗ್ರಹ, ವಿಲೇವಾರಿಯದೇ ದೊಡ್ಡ ಸಮಸ್ಯೆ. ನಗರಸಭೆ ಆಡಳಿತವು ಹಸಿ ಮತ್ತು ಒಣ ಕಸ ವಿಂಗಡಣೆ ಮಾಡಲು ಪ್ರತಿ ಮನೆಗೂ ಎರಡು ಬುಟ್ಟಿಗಳನ್ನು ಕೊಟ್ಟಿದೆ. ಮನೆ ಬಾಗಿಲಿಗೆ ಕಸ ಸಂಗ್ರಹಕ್ಕೆ ಬಂದರೂ ಸಾರ್ವಜನಿಕರು ಮಾತ್ರ ಖಾಲಿ ಜಾಗದಲ್ಲಿ ಬಿಸಾಡುವುದನ್ನು ಮಾತ್ರ ನಿಲ್ಲಿಸಿಲ್ಲ.
ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರಸಭೆ ಸ್ವಚ್ಛತಾ ಸಿಬ್ಬಂದಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಕಸ ಹಾಕುತ್ತಿರುವ ಜಾಗಗಳನ್ನು ಸ್ವಚ್ಛ ಮಾಡಿ, ಸಗಣಿ ಸಾರಿಸಿ, ರಂಗೋಲಿ ಹಾಕುತ್ತಿದ್ದಾರೆ. ಅಲ್ಲದೆ ಹೂವಿನ ಗಿಡಗಳನ್ನು ನೆಟ್ಟು, ಕಸ ಹಾಕುವುದನ್ನು ತಡೆಯಲು ಪ್ರಯತ್ನ ಮಾಡುತ್ತಿದ್ದಾರೆ.
ನಗರಸಭೆ ಪೌರಾಯುಕ್ತ ಕೆ.ಎನ್ ಹೇಮಂತ್ ನೇತೃತ್ವದಲ್ಲಿ ಪ್ರಭಾರ ಪರಿಸರ ಅಭಿಯಂತ ಆಶಾಲತ, ಹಿರಿಯ ಆರೋಗ್ಯ ನಿರೀಕ್ಷಕ ಸಿ. ರಮೇಶ್, ಕಿರಿಯ ಆರೋಗ್ಯ ನಿರೀಕ್ಷಕ ನಿತೀಶ್, ಸಮುದಾಯ ಸಂಚಾಲಕರು ಮತ್ತು ಪೌರಕಾರ್ಮಿಕರನ್ನು ಒಳಗೊಂಡ ತಂಡ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಈಗಾಗಲೇ ಸೂಪರ್‌ವೈಸರ್ ಎನ್.ಗೋವಿಂದ ನೇತೃತ್ವದ ತಂಡ ಈ ವಿನೂತನ ಕಾರ್ಯವನ್ನು ಕಾಗದನಗರ, ಉಜ್ಜನೀಪುರ, ಸುರಗೀತೋಪು ವಾರ್ಡ್‌ಗಳಲ್ಲಿ ಕೈಗೊಂಡು ಸಾರ್ವಜನಿಕರ ಗಮನ ಸೆಳೆದಿದ್ದಾರೆ.
ಉಜ್ಜನೀಪುರದ ಆಸ್ಪತ್ರೆ ಕಾಂಪೌಂಡ್ ಬಳಿ ಹಾಕುತ್ತಿದ್ದ ಕಸದ ಜಾಗದಲ್ಲಿ ಗೋಡೆಗೆ ಬಣ್ಣ ಬಳಿಯಲಾಗಿದೆ. ಕಾಗದನಗರದಲ್ಲಿ ನೇರಳೆ, ಮಾವಿನ ಗಿಡಗಳನ್ನು ನೆಟ್ಟು ಕಸ ಬಿಸಾಡುವುದಕ್ಕೆ ಬ್ರೇಕ್ ಹಾಕಿದ್ದಾರೆ. ಅಲ್ಲದೆ ವಾಹನಕ್ಕೆ ಕಸ ನೀಡದೆ ಸಾರ್ವಜನಿಕ ಸ್ಥಳದಲ್ಲಿ ಬಿಸಾಡಿದರೆ 5 ಸಾವಿರ ರೂ. ದಂಡ ವಿಧಿಸುವ ಜತೆಗೆ ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆ ನೀಡಲಾಗುತ್ತಿದೆ.
ಸ್ಯಾನಿಟರಿ ಪ್ಯಾಡ್ ಸಮಸ್ಯೆ: ಮುಂಚೆ ಹಸಿ ಮತ್ತು ಒಣ ಕಸ ಎಂದು ವಿಂಗಡಿಸಲಾಗುತ್ತಿತ್ತು. ಈಗ ನಾಲ್ಕು ವಿಧವಾಗಿ ವಿಂಗಡಿಸಿ ಕೊಡಬೇಕು ಎಂದು ತಿಳಿಸಲಾಗಿದೆ. ಬ್ಯಾಟರಿ ವಸ್ತುಗಳು, ಮಕ್ಕಳು, ಮಹಿಳೆಯರು ಬಳಸುವ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಕಸದ ಗಾಡಿಗೆ ಕೊಡುವವರು ಪ್ರತ್ಯೇಕವಾಗಿ ಪೇಪರ್ ಸುತ್ತಿ ಕೊಡಬೇಕು. ಪ್ಯಾಡ್‌ಗಳನ್ನು ವಿಲೇವಾರಿ ಮಾಡುವುದು ಸಮಸ್ಯೆಯಾದ ಕಾರಣ ನಗರಸಭೆ ಈ ಕ್ರಮ ಕೈಗೊಂಡಿದೆ.