ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಗ್ರಾಪಂನಿಂದ ನಿರ್ಮಿಸುತ್ತಿರುವ 92 ಲಕ್ಷ ರೂ. ವೆಚ್ಚದ ಕಸ ವಿಲೇವಾರಿ ಘಟಕಕ್ಕೆ ಶಾಸಕ ಆರಗ ಜ್ಞಾನೇಂದ್ರ ಶಂಕುಸ್ಥಾಪನೆ ನೆರವೇರಿಸಿದರು. ಅನ್ನಪೂರ್ಣಾ, ರತ್ನಾಕರ್, ಮಂಗಳಾ ಇತರರಿದ್ದರು. 
ಶಿವಮೊಗ್ಗ

ಸ್ವಚ್ಛತಾ ಕಾರ್ಯಕ್ಕೆ ಜನರ ಸಹಕಾರ ಅವಶ್ಯ

ಸೋಮಶೇಖರ ಎನ್
ತೀರ್ಥಹಳ್ಳಿ: ಪಟ್ಟಣಗಳಲ್ಲಿ ಕಸ ವಿಲೇವಾರಿಯು ಸ್ಥಳೀಯ ಆಡಳಿತಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸ್ವಚ್ಛತಾ ಕಾರ್ಯಕ್ಕೆ ಸಾರ್ವಜನಿಕರ ನೆರವು ಕೂಡ ಮುಖ್ಯ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಕೋಣಂದೂರು ಗ್ರಾಪಂನಿಂದ ನಿರ್ಮಿಸುತ್ತಿರುವ 92 ಲಕ್ಷ ರೂ. ವೆಚ್ಚದ ಕಸ ವಿಲೇವಾರಿ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಕೋಣಂದೂರಿಗೆ ಅಗತ್ಯವಿರುವ ಕಸ ವಿಲೇವಾರಿ ಘಟಕವನ್ನು ಪರಿಸರಕ್ಕೆ ಮಾರಕ ಆಗದಂತೆ ಯೋಜನಾಬದ್ಧವಾಗಿ ನಿರ್ಮಿಸಬೇಕು. ಸಮರ್ಪಕ ಕಾಮಗಾರಿ ಬಗ್ಗೆ ಸಾರ್ವಜನಿಕರು ನಿಗಾ ವಹಿಸಬೇಕು ಎಂದು ತಿಳಿಸಿದರು.
ಆರು ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ತೀರ್ಥಹಳ್ಳಿ ಕಸವಿಲೇವಾರಿ ಘಟಕ ವೈಜ್ಞಾನಿಕವಾಗಿದ್ದು, ಘಟಕದ ನೀರು ಭೂಮಿಗೆ ಇಂಗದಂತೆ ನಿರ್ಮಿಸಲಾಗಿದೆ. ಗ್ರಾಮ ಪಂಚಾಯಿತಿಗಳ ಕಸವನ್ನು ಅಲ್ಲಿಗೆ ಸಾಗಿಸಲು ಅವಕಾಶವಿದ್ದು, ಕಸ ವಿಂಗಡಿಸುವ ಯಂತ್ರ ಅಳವಡಿಸಲಾಗಿದೆ. ಹಿಂದಿನ ಸರ್ಕಾರ ಎಲ್ಲ ಗ್ರಾಪಂಗಳಿಗೂ ಕಸ ಸಾಗಿಸಲು ವಾಹನ ಮಂಜೂರು ಮಾಡಿತ್ತು ಎಂದರು.
ಕೋಣಂದೂರು ಪೇಟೆ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಲಾಗಿದೆ. ಸರ್ಕಾರಿ ಆಸ್ಪತ್ರೆಗೆ ಹೆಚ್ಚುವರಿ ವೈದ್ಯರನ್ನು ನೇಮಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಂಎಂಎಲ್ ಸಂಸ್ಥೆಯ ಸಿಎಸ್‌ಆರ್ ಫಂಡ್‌ನಿಂದ ಆಸ್ಪತ್ರೆಗೆ 25 ಲಕ್ಷ ರೂ. ಮೊತ್ತದ ಉಪಕರಣ ಒದಗಿಸಲಾಗಿದೆ. ವಿಸ್ತರಣೆಗೊಂಡಿರುವ ಪಟ್ಟಣದ ಹೆದ್ದಾರಿ ಡಿವೈಡರ್‌ಗಳಲ್ಲಿ ಗಿಡ ಬೆಳೆಸಲು ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷೆ ಅನ್ನಪೂರ್ಣಾ ವಾಸುದೇವ್, ಕಲ್ಗದ್ದೆ ರತ್ನಾಕರ್, ಮಂಗಳಾ ಗೋಪಿ, ಗೌರಮ್ಮ, ಸತೀಶ್ ಶೆಟ್ಟಿ, ರಾಘವೇಂದ್ರ ಕಂಠಿ ಇತರರಿದ್ದರು.