ರಸ್ತೆ ಅಪಘಾತದಲ್ಲಿ ಭಾನುವಾರ ಮೃತಪಟ್ಟ ಪಿಎಸ್ಐ ಸಚಿನ್ ಮೃತದೇಹಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಪೊಲೀಸ್ ಇಲಾಖೆ ಪರವಾಗಿ ಸರ್ಕಾರಿ ಗೌರವ ಸಲ್ಲಿಸಿದರು.
- ಕುಡುವಳ್ಳಿಯಲ್ಲಿ ಪಿಎಸ್ಐ ಸಚಿನ್ ಅಂತ್ಯಕ್ರಿಯೆ
- ಸಕಲ ಸರ್ಕಾರಿ ಗೌರವ
- ಚಿತ್ರದುರ್ಗದ ಬಳಿ ರಸ್ತೆ ಅಪಘಾತದಲ್ಲಿ ಮೃತ
ತೀರ್ಥಹಳ್ಳಿ: ಚಿತ್ರದುರ್ಗದ ಬಳಿ ರಸ್ತೆ ಅಪಘಾತದಲ್ಲಿ ಭಾನುವಾರ ಮೃತಪಟ್ಟ ಪಿಎಸ್ಐ ಸಚಿನ್ ಅವರ ಅಂತ್ಯಕ್ರಿಯೆ ಸ್ವಗ್ರಾಮ ತೀರ್ಥಹಳ್ಳಿ ತಾಲೂಕಿನ ಕುಡುವಳ್ಳಿ ಗ್ರಾಮದಲ್ಲಿ ಸೋಮವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಜರುಗಿತು.
ಸೋಮವಾರ ಮಧ್ಯಾಹ್ನ 12ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಕುಡುವಳ್ಳಿಗೆ ಆಗಮಿಸಿ ಪೊಲೀಸ್ ಇಲಾಖೆಯಿಂದ ಗೌರವ ಸಲ್ಲಿಸಿದರು.
ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಲಾಯಿತು. ನಂತರ ಅಂತಿಮ ಸಂಸ್ಕಾರ ನಡೆಸಲಾಯಿತು. ಭಾನುವಾರ ರಾತ್ರಿ ಚಿತ್ರದುರ್ಗದಿಂದ ಶವವನ್ನು ಕುಡುವಳ್ಳಿಗೆ ತರಲಾಗಿತ್ತು. ಸಚಿನ್ ತಂದೆ ಕೇವಲ ಆರು ತಿಂಗಳ ಹಿಂದೆ ಮೃತಟ್ಟಿದ್ದು, ತಾಯಿ ಹಾಗೂ ಓರ್ವ ಸಹೋದರ ಇದ್ದಾರೆ. ಸಚಿನ್ ತಂದೆ ಬೆಂಗಳೂರಿನ ಜಯದೇವ ಆಸ್ಪತ್ರೆ ಸಮೀಪದಲ್ಲಿ ಕ್ಯಾಂಟಿನ್ ನಡೆಸಿ ಮಗನ ಭವಿಷ್ಯ ರೂಪಿಸುವಲ್ಲಿ ಶ್ರಮಿಸಿದ್ದರು. ಬೆಂಗಳೂರಿನಲ್ಲಿಯೇ ಓದಿ ಪದವಿ ಗಳಿಸಿದ್ದ ಸಚಿನ್ ಪಿಎಸ್ಐ ಹುದ್ದೆಗೇರುವ ಮೊದಲು ಸಂಚಾರ ವಿಭಾಗದ ಪೇದೆಯಾಗಿಯೂ ಕಾರ್ಯನಿರ್ವಹಿಸಿದ್ದರು. ಬಡತನದಲ್ಲಿಯೇ ಬೆಳೆದು ಉನ್ನತ ಸ್ಥಾನ ತಲುಪಿದ್ದ ಸಚಿನ್ ಅವರ ವಿವಾಹ ಮೇ 10ಕ್ಕೆ ನಿಶ್ಚಯವಾಗಿತ್ತು.