ಪಿಎಸ್‌ಐ ಎನ್.ಮಂಜುನಾಥ್  
ಶಿವಮೊಗ್ಗ

ಪಿಎಸ್‌ಐ ಮಂಜುನಾಥ್ ಹೃದಯಾಘಾತದಿಂದ ಸಾವು | Heart attack

ಪ್ರಮುಖ ಮುಖ್ಯಾಂಶಗಳು

  • ಮೂಲತಃ ತುಮಕೂರು ಜಿಲ್ಲೆಯ ಹಾರೋನಹಳ್ಳಿ ಗ್ರಾಮದ ಮಂಜುನಾಥ್
  • ಪೇದೆಯಾಗಿ ಇಲಾಖೆಗೆ ಸೇರ್ಪಡೆ, ಮುಖ್ಯಪೇದೆ, ಎಎಸ್‌ಐ, ಪಿಎಸ್‌ಐ ಆಗಿ ಬಡ್ತಿ
  • ಕೆಲ ಕಾಲದಿಂದ ಮೂತ್ರಪಿಂಡ (ಕಿಡ್ನಿ) ಸಂಬಂಧಿತ ಚಿಕಿತ್ಸೆ ಪಡೆಯುತ್ತಿದ್ದ ಪಿಎಸ್‌ಐ
ಶಿವಮೊಗ್ಗ: ವಿನೋಬನಗರ ಪೊಲೀಸ್ ಠಾಣೆ(Vinobanagar Police Station) ಪಿಎಸ್‌ಐ ಎನ್.ಮಂಜುನಾಥ್ (56) ಬುಧವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು.
ಮೂಲತಃ ತುಮಕೂರು ಜಿಲ್ಲೆಯ ಹಾರೋನಹಳ್ಳಿ ಗ್ರಾಮದ ಮಂಜುನಾಥ್ ಹಲವು ವರ್ಷಗಳಿಂದ ಶಿವಮೊಗ್ಗದ ವಿನೋಬನಗರದಲ್ಲಿ ಕುಟುಂಬ ಸಮೇತ ನೆಲೆಸಿದ್ದರು. 1992ರ ಬ್ಯಾಚ್‌ನಲ್ಲಿ ಪೇದೆ(ಪಿಸಿ)ಯಾಗಿ ಪೊಲೀಸ್ ಇಲಾಖೆ(Police Department)ಗೆ ಸೇರ್ಪಡೆಯಾಗಿ, ತಮ್ಮ ಸೇವಾವಧಿಯಲ್ಲಿ ಮುಖ್ಯಪೇದೆ, ಎಎಸ್‌ಐ ಆಗಿದ್ದರು. ನಾಲ್ಕು ವರ್ಷಗಳ ಹಿಂದೆ ಪಿಎಸ್‌ಐ ಆಗಿ ಬಡ್ತಿ ಹೊಂದಿ ವಿನೋಬನಗರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು.
ಕೆಲ ಕಾಲದಿಂದ ಮೂತ್ರಪಿಂಡ (ಕಿಡ್ನಿ) ಸಂಬಂಧಿತ ಚಿಕಿತ್ಸೆ ಪಡೆಯುತ್ತಿದ್ದರು. ಶಿವಮೊಗ್ಗದ ಖಾಸಗಿ ಆಸ್ಪತ್ರೆ ಹಾಗೂ ಬಳಿಕ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿತ್ತು. ಬುಧವಾರ ಆರೋಗ್ಯ ತಪಾಸಣೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆ(Manipal KMC Hospital)ಗೆ ಕರೆದೊಯ್ಯುವ ಮಾರ್ಗಮಧ್ಯೆ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆ ಕರೆತರಲಾಗಿತ್ತು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.
ಪ್ರಾಥಮಿಕ ಮಾಹಿತಿಯಂತೆ ಹೃದಯಾಘಾತ(Heart attack)ವೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ವಿವಾಹಿತರಾಗಿದ್ದ ಮಂಜುನಾಥ್ ಅವರಿಗೆ ಮಕ್ಕಳಿರಲಿಲ್ಲ. ಸರಳ ವ್ಯಕ್ತಿತ್ವ ಮತ್ತು ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು ಪೊಲೀಸ್ ಇಲಾಖೆಯಲ್ಲಿ ಉತ್ತಮ ಹೆಸರು ಗಳಿಸಿದ್ದರು.