ಕಾರ್ಗಲ್‌ನಲ್ಲಿ ಎಸ್‌ಐಆರ್ ಅರ್ಜಿ ವಿತರಿಸುತ್ತಿರುವುದು. ಸಿ.ಸದಾನಂದ ಸ್ವಾಮಿ, ವಿ.ಟಿ.ಸ್ವಾಮಿ, ದಿನೇಶ್, ಸುರೇಶ್ ಇತರರಿದ್ದರು. 
ಶಿವಮೊಗ್ಗ

ಬಿಎಲ್‌ಒಗೆ ಅಗತ್ಯ ಮಾಹಿತಿ ನೀಡಿ

ಕಾರ್ಗಲ್: ಎಸ್‌ಐಆರ್ ಪ್ರಕ್ರಿಯೆ ಐದು ದಿನದಿಂದ ಭಾರಂಗಿ ಹೋಬಳಿಯ ಜೋಗ-ಕಾರ್ಗಲ್ ಪಪಂ ವ್ಯಾಪ್ತಿಯಲ್ಲಿ ನಡೆಯುತ್ತಿದ್ದು, ಅರ್ಹ ಮತದಾರರು ಪರಿಷ್ಕರಣಾ ಪಟ್ಟಿಯಿಂದ ವಂಚಿತರಾಗದಂತೆ ಎಚ್ಚರ ವಹಿಸಬೇಕು ಎಂದು ಸಾಗರ ತಾಲೂಕು ಬಿಇಒ ಸಿ.ಸದಾನಂದ ಸ್ವಾಮಿ ಹೇಳಿದರು.
ಪಟ್ಟಣದ ಮನೆ ಮನೆ ಭೇಟಿ ಹಾಗೂ ಅರ್ಜಿ ವಿತರಣೆ ಸಂದರ್ಭ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯು ವಿಶೇಷ ಸಂದರ್ಭ. ಅರ್ಹ ಮತದಾರರು ಪಟ್ಟಿಯಲ್ಲಿ ಇರುವಂತೆ ಗಮನ ವಹಿಸಬೇಕು. ಮತಗಟ್ಟೆ ಅಧಿಕಾರಿಗಳು ಪರಿಷ್ಕರಣಾ ನಮೂನೆಗಳನ್ನು ನೀಡುತ್ತಿದ್ದು, ಮತದಾರರು ಅಗತ್ಯ ಮಾಹಿತಿ ನೀಡಬೇಕು. ಸಾಮಾಜಿಕ ಕಾರ್ಯಕರ್ತರು, ಸಂಘ ಸಂಸ್ಥೆಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಬೂತ್ ಮಟ್ಟದ ಏಜೆಂಟರು ಬಿಎಲ್‌ಒಗಳಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಶಿಕ್ಷಣ ಸಂಯೋಜಕ ವಿ.ಟಿ.ಸ್ವಾಮಿ ಮಾತನಾಡಿ, ಮತದಾರರು ಸ್ವಯಂಪ್ರೇರಿತರಾಗಿ ಮಾಹಿತಿ ನೀಡಬೇಕು. ಎಲ್ಲ ಮತದಾರರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು. ಕರೂರು ಹೋಬಳಿ ಶಿಕ್ಷಣ ಸಂಯೋಜಕ ದಿನೇಶ್, ಸುರೇಶ್, ಶಿಕ್ಷಕ ಪರಶುರಾಮ್, ಬಿಎಲ್‌ಒ ಸಿಲ್ವಾ ಎಸ್. ಡಯಾಸ್ ಇತರರಿದ್ದರು.