ನಾಗರಿಕ ಸೌಲಭ್ಯವನ್ನು ಕಲ್ಪಿಸುವಂತೆ ಒತ್ತಾಯಿಸಿ ಸಾಗರದ 31ನೇ ವಾರ್ಡ್‌ನ ವರದಾ ಕಾಲನಿ ನಿವಾಸಿಗಳು ಪ್ರತಿಭಟನೆ ನಡೆಸಿದರು. ತೀ.ನ.ಶ್ರೀನಿವಾಸ್, ಜಮೀಲ್ ಸಾಗರ್, ಸೀತಾರಾಮ್ ಇತರರಿದ್ದರು. 
ಶಿವಮೊಗ್ಗ

ವರದಾ ಕಾಲನಿಗೆ ಸೌಲಭ್ಯ ಕಲ್ಪಿಸಿ | Protest

ಶಿವಕುಮಾರ ಎಸ್.ಪಿ.
ಸಾಗರ: ವಿವಿಧ ನಾಗರಿಕ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಪಟ್ಟಣದ 31ನೇ ವಾರ್ಡ್‌ನ ವರದಾ ಕಾಲನಿ ನಾಗರಿಕರು ಪ್ರತಿಭಟನೆ ನಡೆಸಿದರು.
ನಗರಸಭೆ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ನಾಗರಿಕರಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಜನಸಂಘಟನೆ ಇಲ್ಲದಿದ್ದರೆ ಅಧಿಕಾರಿಗಳನ್ನು ಬಗ್ಗಿಸಲು ಸಾಧ್ಯವಿಲ್ಲ. ವರದಾ ಕಾಲನಿ ಸೇರಿ ಬಹುತೇಕ ಕಡೆಗಳಲ್ಲಿ ನಾಗರಿಕರಿಗೆ ಸೂಕ್ತ ಸೌಲಭ್ಯ ಇಲ್ಲ. ವಿದ್ಯುತ್, ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ. ನಗರಸಭೆ ಅಧಿಕಾರಿಗಳು ಊರಿನ ಮಧ್ಯಭಾಗದಲ್ಲಿ ಮಾತ್ರ ಸೌಲಭ್ಯ ಕೊಟ್ಟು, ಹೊರವಲಯಗಳ ಬಗ್ಗೆ ನಿರ್ಲಕ್ಷೃ ತೋರುತ್ತಿರುವುದು ಖಂಡನೀಯ. ಶಾಸಕರು, ಅಧಿಕಾರಿಗಳು ಸೂಕ್ತ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಳೆದ ಐದಾರು ವರ್ಷಗಳಿಂದ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಇದ್ದೇವೆ. ಆದರೆ ಭರವಸೆ ಹೊರತುಪಡಿಸಿ ಬೇಡಿಕೆ ಅನುಷ್ಠಾನಕ್ಕೆ ಬಂದಿಲ್ಲ. ಹೋರಾಟದ ಮೂಲಕ ಹಕ್ಕು ದಕ್ಕಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಲನಿ ನಾಗರಿಕರನ್ನು ನಗರಸಭೆ ಸಂಪೂರ್ಣ ನಿರ್ಲಕ್ಷಿಸಿದೆ. ನಾವು ಹಳ್ಳಿಯಲ್ಲಿದ್ದೇವೋ, ನಗರಸಭೆ ವ್ಯಾಪ್ತಿಯಲ್ಲಿದ್ದೇವೋ ಎಂಬ ಅನುಮಾನ ಕಾಡುತ್ತಿದೆ. ರಸ್ತೆ, ನೀರು, ಬೀದಿದೀಪ ಒದಗಿಸುವುದು ನಗರಸಭೆ ಕರ್ತವ್ಯ. ಆದರೆ ವರದಾ ಕಾಲನಿ ಕನಿಷ್ಠ ಸೌಲಭ್ಯಗಳಿಂದ ವಂಚಿತವಾಗಿದೆ. ಅಧಿಕಾರಿಗಳ ಹಾರಿಕೆ ಉತ್ತರದಿಂದ ಜನರು ಬೇಸತ್ತು ಹೋರಾಟ ಮಾಡುವಂತಾಗಿದೆ. ನಾಗರಿಕ ಸೌಲಭ್ಯ ಕಲ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್, ಸಾಮಾಜಿಕ ಕಾರ್ಯಕರ್ತರಾದ ಜಮೀಲ್, ಕುಂಟುಗೋಡು ಸೀತಾರಾಮ್, ಸ್ಥಳೀಯರಾದ ಗೋಪಾಲಣ್ಣ, ಸುಧಾಕರ, ಡ್ಯಾನಿಯಲ್, ಸವಿತಾ ಇತರರಿದ್ದರು.