ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾತನಾಡಿದರು. 
ಶಿವಮೊಗ್ಗ

ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆ ನಾಚಿಕೆಗೇಡಿನ ಸಂಗತಿ | K.S. Eshwarappa

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರಭಕ್ತ ಮುಸ್ಲಿಮರು ಇರಾನ್ ಪರ ನಿಲ್ಲಲು ಸಾಧ್ಯವಿಲ್ಲ
  • ಭಾರತ ಮಾತ್ರ ಮುಸ್ಲಿಮರಿಗೆ ಸುರಕ್ಷಿತ ದೇಶ
  • ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿಕೆ
ಶಿವಮೊಗ್ಗ: ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ(Ayatollah Ali Khamenei) ಹತ್ಯೆಯನ್ನು ವಿರೋಧಿಸಿ ದೇಶದ ಕೆಲ ಮುಸ್ಲಿಮರು ಪ್ರತಿಭಟಿಸುತ್ತಿದ್ದಾರೆ. ನಿಜವಾದ ರಾಷ್ಟ್ರಭಕ್ತ ಮುಸಲ್ಮಾನರು ಎಂದಿಗೂ ಆ ರಾಷ್ಟ್ರದ ಪರವಾಗಿ ನಿಲ್ಲಲು ಸಾಧ್ಯವೇ ಇಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ(K.S.Eshwarappa) ಹೇಳಿದರು.
ಜಗತ್ತಿನ ಬಹಳಷ್ಟು ಮುಸ್ಲಿಂ ರಾಷ್ಟ್ರ(Muslim country)ಗಳಲ್ಲಿ ಅಶಾಂತಿ ಮತ್ತು ಸಂಘರ್ಷದ ವಾತಾವರಣವಿದೆ. ಭಾರತ ಮಾತ್ರ ಮುಸ್ಲಿಮರಿಗೆ ಸುರಕ್ಷಿತ ದೇಶವಾಗಿದೆ. ಇಲ್ಲಿ ಮುಸ್ಲಿಮರು ನಿರಾತಂಕವಾಗಿ, ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತ ವಿರೋಧಿ ಧೋರಣೆ ಹೊಂದಿದ್ದ ಖಮೇನಿ ಪರವಾಗಿ ಮುಸ್ಲಿಮರು ಬೀದಿಗೆ ಇಳಿಯುತ್ತಿರುವುದು ಸರಿಯಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇರಾನ್(Iran) ಭಾರತದ ವ್ಯಾಪಾರ ಪಾಲುದಾರನೇ ಹೊರತು ರಾಜತಾಂತ್ರಿಕವಾಗಿ ಸದಾ ಪಾಕಿಸ್ತಾನದ ಪರ ನಿಂತಿದೆ. ಮುಂಬೈ(Mumbai) ಬಾಂಬ್ ದಾಳಿ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿತ್ತು. 2017ರಲ್ಲಿ ಕಾಶ್ಮೀರ(Kashmir)ದ ವಿಚಾರದಲ್ಲಿ ಭಾರತದ ವಿರುದ್ಧ ಹೇಳಿಕೆ ನೀಡಿದ್ದ ಖಮೇನಿ, 2019ರಲ್ಲಿ 370ನೇ ವಿಧಿ ರದ್ದಾದಾಗಲೂ ವಿರೋಧಿಸಿದ್ದರು. 2020ರ ದೆಹಲಿ ಗಲಭೆ ವೇಳೆ ಭಾರತದಲ್ಲಿ ಮುಸ್ಲಿಮರ ಮಾರಣಹೋಮ ನಡೆಯುತ್ತಿದೆ ಎಂದು ಸುಳ್ಳು ಆರೋಪ ಮಾಡಿದ್ದರು. ಅಂತಹ ವ್ಯಕ್ತಿ ಪರ ಮುಸ್ಲಿಮರು ಹೋರಾಟ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಪೆಹಲ್ಗಾಮ್(Pahalgam) ದಾಳಿಯಲ್ಲಿ ಭಾರತೀಯರು ಮೃತಪಟ್ಟಾಗ ಘಟನೆ ಬಗ್ಗೆ ಮೌನ ವಹಿಸಿದ್ದರು. ಆದರೆ ಇಂದು ಇರಾನ್‌ನ ನಾಯಕನಿಗಾಗಿ ಭಾರತದಲ್ಲಿ ಸಾವಿರಾರು ಮುಸ್ಲಿಮರು ಸೇರುತ್ತಿರುವುದು ದುರದೃಷ್ಟಕರ. ಭಾರತದ ಅನ್ನ ತಿಂದು ಬೆಳೆದವರು ಈ ಮಣ್ಣಿನ ಪರವಾಗಿ ನಿಲ್ಲಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಮಟ್ಟ(Global level)ದಲ್ಲಿ ಶಾಂತಿಗಾಗಿ ಶ್ರಮಿಸುತ್ತಿದ್ದಾರೆ. ಆದರೆ ಇಸ್ರೇಲ್ಗೆ ಯುದ್ಧ ನಿಲ್ಲಿಸಲು ಮೋದಿ ಅವರು ಹೇಳಬೇಕು ಎಂದು ಕಾಂಗ್ರೆಸ್ ಮತ್ತು ಕೆಲ ಮುಸ್ಲಿಂ ಸಂಘಟನೆಗಳು ಒತ್ತಾಯಿಸುತ್ತಿದ್ದಾರೆ. ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಇ.ಕಾಂತೇಶ್, ಇ.ವಿಶ್ವಾಸ್, ಮಹಾಲಿಂಗಶಾಸ್ತ್ರಿ, ಮೋಹನ್ ಜಾಧವ್ ಇತರರಿದ್ದರು.
"

ಪಾಕಿಸ್ತಾನದಲ್ಲಿ ಮಸೀದಿಗಳ ಮೇಲೆ ಬಾಂಬ್ ದಾಳಿ ನಡೆಯುತ್ತಲೇ ಇವೆ. ಆದರೆ ಭಾರತದಲ್ಲಿ ಮಸೀದಿಗಳ ಮೇಲೆ ಇದುವರೆಗೂ ಬಾಂಬ್ ಬಿದ್ದ ಉದಾಹರಣೆಗಳಿಲ್ಲ. ಅಷ್ಟರಮಟ್ಟಿಗೆ ಮುಸ್ಲಿಮರಿಗೆ ಭಾರತ ದೇಶದಲ್ಲಿ ಭದ್ರತೆ ಇದೆ. ಮುಸ್ಲಿಮರು ದೇಶದ ಭದ್ರತೆಯನ್ನು ಗೌರವಿಸಬೇಕು ಮತ್ತು ದೇಶದ ಪರವಾಗಿ ನಿಲ್ಲಬೇಕು.