ಮೆಗ್ಗಾನ್ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಬೇಕು ಹಾಗೂ ಬಿಪಿ, ಶುಗರ್‌ಗೆ ಉಚಿತವಾಗಿ ಇನ್ಸುಲಿನ್, ಮಾತ್ರೆ ನೀಡುವಂತೆ ಆಗ್ರಹಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ಕಲ್ಲೂರು ಮೇಘರಾಜ್, ಎಸ್.ಬಿ.ಅಶೋಕ್‌ಕುಮಾರ್, ಹೊಳೆಮಡಲು ವೆಂಕಟೇಶ್, ಜನಮೇಜಿರಾವ್, ಮಂಜುನಾಥ್ ಇತರರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
- ಮೆಗ್ಗಾನ್‌ನಲ್ಲಿ ಸ್ಥಗಿತವಾಗಿ ಉಚಿತ ವಿತರಣೆ ವ್ಯವಸ್ಥೆ
- ಸೇವೆಯಲ್ಲಿದೆ ಹಲವು ಲೋಪ
- ಶಾಂತವೇರಿ ಗೋಪಾಲಗೌಡ ಟ್ರಸ್ಟ್ ಆರೋಪ
ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ಮಧುಮೇಹಿಗಳಿಗೆ ಉಚಿತವಾಗಿ ನೀಡುತ್ತಿದ್ದ ಇನ್ಸುಲಿನ್ (insulin) ಹಾಗೂ ಚಿಕಿತ್ಸೆ (treatment) ಯನ್ನು ನಿಲ್ಲಿಸಲಾಗಿದೆ. ರಕ್ತದೊತ್ತಡದಿಂದ ಬಳಲುತ್ತಿರುವ ರೋಗಿಗಳಿಗೆ ನೀಡುತ್ತಿದ್ದ ಟೆಲ್‌ಮಿಸಾಲ್ ಮಾತ್ರೆಗಳ ವಿತರಣೆಯನ್ನೂ ಸ್ಥಗಿತಗೊಳಿಸಲಾಗಿದೆ. ಈ ಹಿಂದಿನಂತೆಯೇ ಇವುಗಳ ಉಚಿತ (free) ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ (trust) ಪ್ರಮುಖರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಇನ್ಸುಲಿನ್ ಹಾಗೂ ಮಾತ್ರೆಗಳ ಉಚಿತ ವಿತರಣೆ ನಿಲ್ಲಿಸಿರುವುದು ಜನವಿರೋಧಿ ನಿರ್ಧಾರವಾಗಿದ್ದು, ಮೆಗ್ಗಾನ್‌ಗೆ ನಮ್ಮ ಜಿಲ್ಲೆ ಮಾತ್ರವಲ್ಲದೆ ದಾವಣಗೆರೆ, ಚಿಕ್ಕಮಗಳೂರು, ಉತ್ತರಕನ್ನಡ, ಚಿತ್ರದುರ್ಗ ಜಿಲ್ಲೆಗಳಿಂದ ರಕ್ತದೊತ್ತಡ ಹಾಗೂ ಮಧುಮೇಹ ಪೀಡಿತರು ಬರುತ್ತಾರೆ. ಅವರೆಲ್ಲರಿಗೂ ಈಗ ತೊಂದೆಯಾಗಿದೆ ಎಂದು ಪ್ರತಿಭಟನಾಕಾರರು ಕಳವಳ ವ್ಯಕ್ತಪಡಿಸಿದರು.
ಸರ್ಕಾರದಿಂದ ಸರಬರಾಜಾಗುತ್ತಿದ್ದ ಇನ್ಸುಲಿನ್ ಹಾಗೂ ಬಿಪಿ ಮಾತ್ರೆಗಳು ಪರಿಣಾಮಕಾರಿಯಾಗಿಲ್ಲ ಎಂದು ಸುಳ್ಳು ಹೇಳಿ, ಮೆಡಿಕಲ್ ಸ್ಟೋರ್ಸ್‌ಗಳಿಂದ ಇವುಗಳನ್ನು ತರುವಂತೆ ರೋಗಿಗಳಿಗೆ ವೈದ್ಯರು ತಿಳಿಸುತ್ತಿದ್ದಾರೆ. ಇದರಿಂದ ಬಡ ರೋಗಿಗಳ ಜೇಬಿಗೂ ಹೊರೆಯಾಗುತ್ತಿದೆ ಎಂದು ತಿಳಿಸಿದರು.
ಇದರ ಜತೆಗೆ ತಿಂಗಳಿಗೊಮ್ಮೆ 10 ರೂ. ಪಾವತಿಸಿ ಹೊಸದಾಗಿ ಹೊರರೋಗಿಗಳ ಚೀಟಿ ಮಾಡಿಸಬೇಕೆಂಬ ಜನವಿರೋಧಿ ನೀತಿಯನ್ನು ಕೂಡ ಮೆಗ್ಗಾನ್ ಆಡಳಿತ ಮಂಡಳಿ ಜಾರಿಗೆ ತಂದಿದೆ. ಇದನ್ನು ಕೈ ಬಿಡಬೇಕು. ಹಿರಿಯ ನಾಗರಿಕರಿಗೆ ಪ್ರತ್ಯೇಕ ಒಪಿಡಿ ಕೌಂಟರ್ ತೆರೆಯಬೇಕು. ಹಿರಿಯ ನಾಗರಿಕರಿಗೆ ಮತ್ತು ಮಹಿಳೆಯರಿಗೆ ಆದ್ಯತೆ ನೀಡಿ ಮೊದಲು ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿದರು.
ರೋಗಿಗಳನ್ನು ಗಾಲಿ ಕುರ್ಚಿಯಲ್ಲಿ ಕೊಂಡೊಯ್ಯಲು ಡಿ ಗ್ರೂಪ್ ನೌಕರರು ಲಂಚ ಪಡೆಯುತ್ತಿರುವ ದೂರುಗಳಿವೆ. ಇದನ್ನು ತಪ್ಪಿಸಬೇಕು. ಔಷಧ, ಮುಲಾಮು ಮತ್ತು ಸಿರಾಪ್ ನೀಡುವ ಔಷಧ ಕೌಂಟರ್‌ಗಳಲ್ಲಿ ಹಿರಿಯರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸರದಿ ಮಾಡಿಸಬೇಕು ಎಂದು ಒತ್ತಾಯಿಸಿದರು.
ತುರ್ತು ಚಿಕಿತ್ಸಾ ಘಟಕ ಮತ್ತು ಒಪಿಡಿಗಳಿಗೆ ತಜ್ಞ ವೈದ್ಯರ ನೇಮಕ ಮಾಡಬೇಕು. ಕಡ್ಡಾಯವಾಗಿ ಅವರು ಬೆಳಗ್ಗೆಯಿಂದ ಸಂಜೆಯವರೆಗೆ ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಟ್ರಸ್ಟ್‌ನ ಪ್ರಮುಖರಾದ ಕಲ್ಲೂರು ಮೇಘರಾಜ್, ಹೊಳೆಮಡಲು ವೆಂಕಟೇಶ್, ಎಚ್.ಎಂ.ಸಂಗಯ್ಯ, ಎಸ್.ಬಿ. ಅಶೋಕ್‌ಕುಮಾರ್, ಜನಮೇಜಿರಾವ್, ವೇದಾಂತ್‌ಗೌಡ, ಮಂಜುನಾಥ್, ಶಂಕ್ರನಾಯ್ಕ ಮುಂತಾದವರಿದ್ದರು.