ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಬಿ.ಪ್ರೇಮಾ, ಆರ್.ನಾಗರತ್ನ, ಶೀಲಾ, ಜಿ.ರತ್ನಾ, ಯಶೋಧಾ, ಇಂದಿರಾ ಇದ್ದರು.
- ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ
- ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘಟನೆ ನೇತೃತ್ವ
- ಸಾಮಾಜಿಕ ಭದ್ರತೆ ಸೇರಿ 24 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ
ಶಿವಮೊಗ್ಗ: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕನಿಷ್ಠ ವೇತನ ಹಾಗೂ ಸಾಮಾಜಿಕ ಭದ್ರತೆ ಕಲ್ಪಿಸಬೇಕು ಎಂದು ಆಗ್ರಹಿಸಿ ಸೋಮವಾರ ನಗರದಲ್ಲಿ ಸಾವಿರಾರು ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘಟನೆ(Karnataka State Anganwadi Workers and Helpers Independent Organization) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಮಹಾನಗರ ಪಾಲಿಕೆಯಿಂದ ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ನೆಹರು ರಸ್ತೆ, ಟಿ.ಸೀನಪ್ಪ ಶೆಟ್ಟಿ ವೃತ್ತ, ಮಹಾವೀರ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕಾರ್ಯಕರ್ತೆಯರಿಗೆ 26 ಸಾವಿರ ರೂ. ಹಾಗೂ ಸಹಾಯಕಿಯರಿಗೆ 20 ಸಾವಿರ ರೂ. ಕನಿಷ್ಠ ವೇತನ(Minimum wage
) ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
1975ರಲ್ಲಿ ಆರಂಭವಾದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ(Comprehensive Child Development Plan)ಗೆ 50 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಸಿಬ್ಬಂದಿಯ ಸೇವೆ ಗುರುತಿಸಬೇಕು. ಶಾಲಾಪೂರ್ವ ಶಿಕ್ಷಣ, ಪೌಷ್ಟಿಕ ಆಹಾರ, ಆರೋಗ್ಯ ಸೇವೆ, ಗರ್ಭಿಣಿ ಮತ್ತು ಬಾಣಂತಿಯರ ಮಾಹಿತಿ ನಿರ್ವಹಣೆ ಸೇರಿ ಹಲವು ಇಲಾಖಾ ಹಾಗೂ ಹೆಚ್ಚುವರಿ ಕೆಲಸಗಳನ್ನು ಅಂಗನವಾಡಿ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ. ಇವರಿಗೆ ಸಾಮಾಜಿಕ ಭದ್ರತೆ ಇಲ್ಲವಾಗಿದೆ. ಆ ನಿಟ್ಟಿನಲ್ಲಿ ಕನಿಷ್ಠ ವೇತನ ಹಾಗೂ ಸಾಮಾಜಿಕ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಇಲಾಖೆಯ ಕೆಲಸ ಹೊರತುಪಡಿಸಿ ಇತರೆ ಇಲಾಖೆಗಳ ಕೆಲಸಗಳಿಗೆ ನಿಯೋಜಿಸಬಾರದು. ಅಂಗನವಾಡಿಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ(LKG and UKG) ಆರಂಭಿಸಬೇಕು. ಕಳಪೆ ಗುಣಮಟ್ಟದ ಸಮವಸ್ತ್ರ ಬದಲಿಸಿ ಉತ್ತಮ ಗುಣಮಟ್ಟದ ಸೀರೆ ನೀಡಬೇಕು. ಗೃಹಲಕ್ಷ್ಮಿ ಸರ್ವೆ, ಜಾತಿ ಪ್ರಮಾಣಪತ್ರ ವಿತರಣೆ ಸೇರಿ ಕಂದಾಯ ಹಾಗೂ ಇತರೆ ಇಲಾಖೆಗಳ ಕೆಲಸಗಳಿಂದ ಅಂಗನವಾಡಿ ಸಿಬ್ಬಂದಿ ಕೈಬಿಡಬೇಕು. ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್‌ಒ ಕೆಲಸದಿಂದ ಕೈಬಿಡಬೇಕು ಅಥವಾ ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಪೋಷಣ್ ಟ್ರ್ಯಾಕರ್‌ಗಾಗಿ 5ಎ ಮೊಬೈಲ್ ಹಾಗೂ ಅಗತ್ಯ ನೆಟ್‌ವರ್ಕ್ ಸೌಲಭ್ಯ ಒದಗಿಸಬೇಕು. ಪ್ರತಿತಿಂಗಳು 5ರೊಳಗೆ ಗೌರವಧನ ಪಾವತಿಸಬೇಕು. ಅಂಗನವಾಡಿ ಕೇಂದ್ರ(Anganwadi Center)ಗಳಿಗೆ ಅಗತ್ಯ ಪೀಠೋಪಕರಣ ಸೇರಿ ಮೂಲಸೌಕರ್ಯ ಒದಗಿಸಬೇಕು. ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವುದು ಸೇರಿ 24 ಬೇಡಿಕೆಗಳನ್ನು ಈಡೇರಿಸುಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಸಂಘಟನೆ ಅಧ್ಯಕ್ಷೆ ಬಿ.ಪ್ರೇಮಾ, ಜಿಲ್ಲಾಧ್ಯಕ್ಷೆ ಆರ್.ನಾಗರತ್ನ, ಸಹ ಕಾರ್ಯದರ್ಶಿಗಳಾದ ಶೀಲಾ, ಜಿ.ರತ್ನಾ, ಉಪಾಧ್ಯಕ್ಷೆ ಯಶೋಧಾ, ಕಾರ್ಯದರ್ಶಿ ಇಂದಿರಾ ಸೇರಿ ಸಾವಿರಾರು ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.