ರಾಜ್ಯ ಅನುದಾನರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಒಕ್ಕೂಟದ ಅಧ್ಯಕ್ಷ ಜಿ.ಸಿ.ಶಿವಪ್ಪ.
- ರಾಜ್ಯ ಸರ್ಕಾರದಿಂದ ಕನ್ನಡ ಮಾಧ್ಯಮ ಶಾಲೆ ಕಡೆಗಣನೆ
- ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಿಗೆ ಅನುದಾನ ಒದಗಿಸಿ
- ಆಡಳಿತ ಮಂಡಳಿ ಮತ್ತು ನೌಕರರ ಒಕ್ಕೂಟದ ಅಧ್ಯಕ್ಷ ಶಿವಪ್ಪ ಎಚ್ಚರಿಕೆ
ಶಿವಮೊಗ್ಗ: ರಾಜ್ಯ ಸರ್ಕಾರವು 1995ರ ನಂತರ ಆರಂಭವಾದ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಿಗೆ ವೇತನ ಅನುದಾನ ನೀಡುವಂತೆ ಒತ್ತಾಯಿಸಿ ಜೂ.5ರಂದು ಶಿಕ್ಷಣ ಸಚಿವ(Education Minister)ರ ಮನೆ ಎದುರು ಸಾವಿರಾರು ಶಿಕ್ಷಕರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಅನುದಾನರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಒಕ್ಕೂಟದ ಅಧ್ಯಕ್ಷ ಜಿ.ಸಿ.ಶಿವಪ್ಪ ಹೇಳಿದರು.
ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆ ಎಂಬುದು ಕೇವಲ ಹೇಳಿಕೆಗೆ ಸೀಮಿತವಾಗಿದೆ. 30 ವರ್ಷದಿಂದ ಸರ್ಕಾರಗಳು ಅನುದಾನ ಘೋಷಿಸದೆ ಸಾಕಷ್ಟು ಶಾಲೆಗಳು ಬೀಗ(Schools close) ಹಾಕುತ್ತಿವೆ. ಈ ಶಾಲೆಗಳಲ್ಲಿರುವ ಗ್ರಾಮೀಣ ಭಾಗದ ಮಕ್ಕಳಿಗೆ ಸರ್ಕಾರ ಯಾವುದೇ ಸೌಲಭ್ಯ ಕಲ್ಪಿಸದೆ ಅನ್ಯಾಯ ಮಾಡುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಸಚಿವ ಮಧು ಬಂಗಾರಪ್ಪ ಅವರು ಬಜೆಟ್‌ನಲ್ಲಿ ಅನುದಾನ ಕೊಡಿಸುವ ಭರವಸೆ ನೀಡಿದ್ದರು. ಸಿಎಂ ಸಿದ್ದರಾಮಯ್ಯ ಕೂಡ ವೇತನ ಅನುದಾನಕ್ಕೆ ಒಳಪಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ನಂಬಿಕೆಗಳು ಹುಸಿಯಾಗಿದ್ದು, ಕನ್ನಡ ಮಾಧ್ಯಮ(Kannada Medium) ಶಾಲಾ ಕಾಲೇಜುಗಳು ಅವನತಿ ದಾರಿ ಹಿಡಿದಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟಿರುವ 46 ಸಾವಿರ ಕೋಟಿ ರೂ. ಅನುದಾನದಲ್ಲಿ ಕನ್ನಡ ಮಾಧ್ಯಮ ಅನುದಾನರಹಿತ ಶಾಲೆ(Unaided School)ಗಳಿಗೆ ಬಿಡಿಗಾಸನ್ನೂ ಕೊಟ್ಟಿಲ್ಲ. ಕನ್ನಡ ಮಾಧ್ಯಮ ಶಾಲೆ ಮಕ್ಕಳು ಹಣ ಕೊಟ್ಟು ಪುಸ್ತಕ ಖರೀದಿಸಬೇಕಿದೆ. ಕನ್ನಡ ಶಾಲೆಗಳನ್ನು ಉಳಿಸುವಲ್ಲಿ ವಿಫಲವಾಗಿರುವ ಸರ್ಕಾರ ಆಂಗ್ಲ ಮಾಧ್ಯಮ ಶಾಲೆಗಳನ್ನು ಕೆಪಿಎಸ್(ಕರ್ನಾಟಕ ಪಬ್ಲಿಕ್ ಸ್ಕೂಲ್) ಮಾಡುತ್ತಿದೆ ಎಂದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಐ.ಎಸ್.ಹೊರಗಿನಮಠ, ಶಿವಮೊಗ್ಗ ಜಿಲ್ಲಾಧ್ಯಕ್ಷ ಜಿ.ಟಿ.ಸದಾನಂದ್, ಪ್ರಮುಖರಾದ ಸಂತೋಷ್, ನಂಜುಂಡಸ್ವಾಮಿ, ಧನಂಜಯ, ಪ್ರದೀಪ್ ಸುದ್ದಿಗೋಷ್ಠಿಯಲ್ಲಿದ್ದರು.
ಬೆಳಗಾವಿ ಅಧಿವೇಶನದಲ್ಲೂ ಪ್ರತಿಭಟನೆ
ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆ ಉಳಿಸಲು ಪ್ರತಿ ವರ್ಷ ನೂರಾರು ಕೋಟಿ ರೂ. ವ್ಯಯಿಸುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಆ ಕೆಲಸ ಆಗುತ್ತಿಲ್ಲ. ಕನ್ನಡ ಶಾಲೆಗಳಿಗೆ ಅನುದಾನ ಕೊಡುವುದರಿಂದ ಭಾಷೆ ಉಳಿಯುತ್ತದೆ. ಜೂನ್‌ನಲ್ಲಿ ಬೆಳಗಾವಿಯಲ್ಲಿ ನಡೆಯುವ ಅಧಿವೇಶನ(Session)ದಲ್ಲಿ ಐತಿಹಾಸಿಕ ತೀರ್ಮಾನ ಕೈಗೊಳ್ಳಬೇಕು. ಇಲ್ಲವಾದಲ್ಲಿ ಅಲ್ಲಿಯೂ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಜಿ.ಸಿ.ಶಿವಪ್ಪ ಎಚ್ಚರಿಸಿದರು.
"
ರಾಜ್ಯದಲ್ಲಿ ಅನುದಾನ ರಹಿತ 133 ಪ್ರಾಥಮಿಕ ಶಾಲೆ, 211 ಪ್ರೌಢಶಾಲೆ ಹಾಗೂ 133 ಪಿಯು ಕಾಲೇಜುಗಳಿವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 138 ಕೋಟಿ ರೂ. ಅಂದಾಜಿಸಲಾಗಿತ್ತು. ಇದೀಗ 341 ಕೋಟಿ ರೂ. ಬೇಕಿದೆ. ಸಿಎಂ ಬಳಿ ಕಡತ ಇದ್ದು, ಅದಕ್ಕೆ ಅಂತಿಮ ಮುದ್ರೆ ಮಾತ್ರ ಬೀಳುತ್ತಿಲ್ಲ.
— ಜಿ.ಸಿ.ಶಿವಪ್ಪ, ರಾಜ್ಯ ಅನುದಾನರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಒಕ್ಕೂಟದ ಅಧ್ಯಕ್ಷ