ನಾಗರಾಜ್ ಗೌಡ 
ಶಿವಮೊಗ್ಗ

ವಿಜಯೇಂದ್ರ ಕ್ಷಮೆ ಕೇಳದಿದ್ದರೆ ಪ್ರತಿಭಟನೆ | Press meet

ಶಿಕಾರಿಪುರ: ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಶಾಸಕ ಬಿ.ವೈ.ವಿಜಯೇಂದ್ರ ಅವರು ಕಾಂಗ್ರೆಸ್ ಕಾರ್ಯಕರ್ತರನ್ನು ಪುಢಾರಿಗಳು ಎಂದು ಕರೆದಿದ್ದಾರೆ. ಅವರು ಬಹಿರಂಗವಾಗಿ ಕ್ಷಮೆಯಾಚಿಸದಿದ್ದರೆ ಪ್ರತಿಭಟನೆ ಮಾಡುವ ಜತೆಗೆ ೆರಾವ್ ಹಾಕಲಾಗುವುದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಸ್.ಪಿ.ನಾಗರಾಜ ಗೌಡ ಎಚ್ಚರಿಸಿದರು.
ಕಾಂಗ್ರೆಸ್ ಸರ್ಕಾರ ಈವರೆಗೆ ಯಾವೊಬ್ಬ ರೈತನಿಗೂ ನೋಟಿಸ್ ನೀಡಿ ಒಕ್ಕಲೆಬ್ಬಿಸಿಲ್ಲ. ನೀವು ಅನಗತ್ಯ ಆಪಾದನೆ ಮಾಡುವುದು ಸರಿಯಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರುತ್ತಿರುವುದರಿಂದ ಕೇವಲ ಪ್ರಚಾರಕ್ಕಾಗಿ ಇಂಥಹ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು. ಕಾಂಗ್ರೆಸ್ ಸರ್ಕಾರ ಯಾವಾಗಲೂ ರೈತಪರ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2021-22ರಲ್ಲಿ ಬಿಜೆಪಿ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಗ್ರಾಮ ಠಾಣಾ, ಕಂದಾಯ ಜಮೀನುಗಳನ್ನು ಇಂಡೀಕರಣ ಮಾಡಿದವರು ನೀವು. ಕೇಂದ್ರ ಮತ್ತು ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದ್ದಾಗ ಬಗರ್‌ಹುಕುಂ ರೈತರ ಸಮಸ್ಯೆಗಳನ್ನು ಪರಿಹರಿಸದೆ ಅದನ್ನು ಜೀವಂತವಾಗಿಟ್ಟಿದ್ದೀರಿ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಹತ್ತಿರ ಇರುವುದರಿಂದ ಈ ವಿಷಯವನ್ನು ಮುನ್ನೆಲೆಗೆ ತರುತ್ತಿದ್ದೀರಿ ಎಂದು ದೂರಿದರು.
ಕಳೆದ ನಾಲ್ಕೂವರೆ ದಶಕಗಳಿಂದ ನೀವು ಒಂದಿಲ್ಲೊಂದು ಅಧಿಕಾರದಲ್ಲಿದ್ದೀರಿ. ಅಧಿಕಾರ ಇಲ್ಲದಿದ್ದರೂ ಸ್ವಾಭಿಮಾನಿ ಕಾಂಗ್ರೆಸಿಗರು ನಿಮ್ಮ ಮನೆ ಬಾಗಿಲಿಗೆ ಬಂದಿಲ್ಲ. ನಮ್ಮ ಮತದಾರರು ಅಂದಿನಿಂದ ಇಂದಿನವರೆಗೂ ಪಕ್ಷದ ಪರವಾಗಿ ಮತ ಚಲಾಯಿಸುತ್ತಿದ್ದಾರೆ. ಅಧಿಕಾರಿಗಳು ತಪ್ಪು ಮಾಡಿದಾಗ ವಿಪಕ್ಷದವರಾದ ನಾವು ಕೇಳುವದು ಸಹಜ. ಅದನ್ನು ತಪ್ಪು ಎನ್ನಲು ನಿಮಗೇನು ಹಕ್ಕಿದೆ ಎಂದು ಪ್ರಶ್ನಿಸಿದರು. ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರಿವಾಳದ ಶಿವರಾಂ, ಅಶ್ವಿನ್ ಪಾಟೀಲ್, ಯುವ ಕಾಂಗ್ರೆಸ್ ಅಧ್ಯಕ್ಷ ಶಿವು ಹುಲ್ಮಾರ್, ಕೆಡಿಪಿ ಜಿಲ್ಲಾ ಸದಸ್ಯ ಉಮೇಶ್, ಮಂಜುನಾಥ್, ಪ್ರೇಮ್ಕುಮಾರ್, ನಾಗರಾಜ್, ಮಲ್ಲಿಕ್ ನಾಯ್ಕ, ಶಿವಲಿಂಗಪ್ಪ, ಬಸವರಾಜಪ್ಪ, ಸುರೇಶ ಸುದ್ದಿಗೋಷ್ಠಿಯಲ್ಲಿದ್ದರು.