ಶಿವಮೊಗ್ಗ: ಭದ್ರಾ ಜಲಾಶಯದ ಎಡ-ಬಲದಂಡೆ ನಾಲೆಗಳಲ್ಲಿ 20 ದಿನ ನೀರು ಹರಿಸಬೇಕು. ಭದ್ರಾ ಎಡನಾಲೆ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ಡಿ. 25ರಿಂದ ಮೇ 31ರವರೆಗೂ ನೀರು ಹರಿಸಲು ವೇಳಾಪಟ್ಟಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಎಡನಾಲೆ ಅಚ್ಚುಕಟ್ಟುದಾರರ ಹಿತಾರಕ್ಷಣಾ ಸಮಿತಿ, ರೈತ ಸಂಘದ ಪ್ರಮುಖರು ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
30 ದಿನದಿಂದ ನೀರಿಲ್ಲದೇ ಬೆಳಗಳು ಒಣಗುತ್ತಿವೆ. ಕಾಲುವೆಗೆ ನೀರು ಬಿಟ್ಟರೂ ಕೊನೆ ಭಾಗ ತಲುಪಲು 15 ದಿನ ಬೇಕು. ಹೀಗಾಗಿ ತೋಟಗಳು ಒಣಗಿ ನಾಶವಾಗುವ ಮುನ್ನ ಎಡದಂಡೆ ಕಾಲುವೆಗೆ ನೀರು ಹರಿಸಬೇಕು. ನೀರಾವರಿ ಸಲಹಾ ಸಮಿತಿ ಸಭೆಯನ್ನು ಕರೆದು ಬೇಸಿಗೆಗೆ ನೀರು ಹರಿಸುವ ವೇಳಾಪಟ್ಟಿ ಪ್ರಕಟಿಸಬೇಕೆಂದು ಆಗ್ರಹಿಸಿದರು.
ಭದ್ರಾ ಮೇಲ್ದಂಡೆ ಕಾಲುವೆಗೆ ನೀರು ಹರಿಸುತ್ತಿರುವುದನ್ನು ಸ್ಥಗಿತಗೊಳಿಸಬೇಕು. ತುಂಗಾದಿಂದ ಭದ್ರಾ ಜಲಾಶಯಕ್ಕೆ ನೀರು ಕೊಂಡೊಯ್ಯುವ ಯೋಜನೆ ಪೂರ್ಣಗೊಳಿಸಬೇಕು. ತಿಂಗಳಲ್ಲಿ ಕನಿಷ್ಠ 20 ದಿನದಂತೆ ಎಲ್ಲ ತಿಂಗಳಲ್ಲೂ ಭದ್ರಾ ನಾಲೆಯಲ್ಲಿ ನೀರು ಹರಿಸಲು ಯೋಜನೆ ರೂಪಿಸಬೇಕು. ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಎಲ್ಲ ಕೆರೆಗಳನ್ನು ಭದ್ರಾ ಮೇಲ್ದಂಡೆ ಅಭಿವೃದ್ಧಿ ಯೋಜನೆಯಲ್ಲಿ ಸೇರಿಸಿ ಅಭಿವೃದ್ಧಿಪಡಿಸಬೇಕು. ಮಳೆಗಾಲದಲ್ಲಿ ಭತ್ತ ಬೆಳೆಯದ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಕೆ.ಟಿ.ಗಂಗಾಧರ್, ಪುಟ್ಟಪ್ಪ, ಯಶವಂತರಾವ್ ಘೋರ್ಪಡೆ, ಜೆ.ರಘುನಾಥ್, ಕೆ.ಜಗದೀಶ್, ಮಂಜುನಾಥ್, ಮೋಹನ್‌ಕುಮಾರ್, ಬಸವರಾಜ್, ಅವಿನಾಶ್, ವೆಂಕಟೇಶ್ ಇತರರಿದ್ದರು.