ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಶಿವಮೊಗ್ಗ: ಜಿಲ್ಲೆಯಲ್ಲಿ ದಿನೇದಿನೆ ಹೆಚ್ಚುತ್ತಿರುವ ಗಾಂಜಾ(Ganja) ವ್ಯಸನಿಗಳ ಅಟ್ಟಹಾಸ ಹಾಗೂ ಹಿಂದೂ ಸಮಾಜದ ಮೇಲೆ ನಡೆಯುತ್ತಿರುವ ಸರಣಿ ದೌರ್ಜನ್ಯಗಳಿಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ವಿಶ್ವ ಹಿಂದೂ ಪರಿಷತ್(Vishwa hindu parishad) ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ ಎಚ್ಚರಿಸಿದರು.
ಗಾಂಜಾ ಮತ್ತು ಮಾದಕ ವಸ್ತುಗಳ ಹಾವಳಿ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ(State govt) ಸಂಪೂರ್ಣ ವಿಫಲವಾಗಿದೆ. ಕೆಲ ಮುಸ್ಲಿಮರು ಉದ್ದೇಶಪೂರ್ವಕವಾಗಿ ಗಾಂಜಾ ಸೇವಿಸಿ ಹಿಂದೂಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಹೆಣ್ಣುಮಕ್ಕಳ ಜತೆ ಅಶ್ಲೀಲವಾಗಿ ವರ್ತಿಸಿ ಭಯ ಹುಟ್ಟಿಸುವ ನೀಚ ಕೃತ್ಯಗಳು ಹೆಚ್ಚುತ್ತಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಸೂಳೆಬೈಲ್(Sulebaile)ನಲ್ಲಿ ವಿದ್ಯಾರ್ಥಿ ಸಂಕೇತ್ ಹತ್ಯೆ ಹಿಂದೆ ಗಾಂಜಾ ವಾಸನೆ ಬಂದಿದೆ. ಸಾಗರ ತಾಲೂಕಿನಲ್ಲಿಯೂ ಅಪ್ರಾಪ್ತ ಬಾಲಕರು ಹಿಂದೂ ಯುವಕರ ಮೇಲೆ ಹಲ್ಲೆ ನಡೆಸಿರುವುದು ಸಮಾಜದ ಶಾಂತಿ ಕದಡುವ ಪ್ರಯತ್ನವಾಗಿದೆ. ಶಿರಾಳಕೊಪ್ಪ(Shiralakoppa)ದಲ್ಲೂ ಗಾಂಜಾ ವ್ಯಸನಿಗಳು ಹಿಂದೂ ಯುವಕರನ್ನು ಅಡ್ಡಗಟ್ಟಿ ದೌರ್ಜನ್ಯ ಎಸಗಿದ್ದಾರೆ ಎಂದರು.
ಜಿಲ್ಲೆಯನ್ನು ಶೀಘ್ರವೇ ಮಾದಕ ವಸ್ತು ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕು. ಗಾಂಜಾ ಮಾರಾಟಗಾರರು ಮತ್ತು ಸೇವನೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ರಮೇಶ್‌ಬಾಬು, ಹಾ.ರಾಮಪ್ಪ, ರಾಜೇಶ್ ಗೌಡ, ವಡಿವೇಲು, ರಾಘವನ್, ಸುರೇಶ್ ಬಾಬು ಸುದ್ದಿಗೋಷ್ಠಿಯಲ್ಲಿದ್ದರು.