ಕಾರ್ಗಲ್ನಲ್ಲಿ ಪೊಲೀಸರಿಂದ ರಕ್ಷಿಸಲ್ಪಟ್ಟ ಕೂಲಿ ಕಾರ್ಮಿಕ ಕುಟುಂಬ. ಅಣ್ಣಪ್ಪ, ಪುರುಷೋತ್ತಮ, ಎಂ.ಕೆ.ಸುರೇಶ್ ಇತರರಿದ್ದರು.
ಕಾರ್ಗಲ್: ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ಮಳೆಯಲ್ಲೇ ನೆನೆಯುತ್ತ ಪಟ್ಟಣದ ಬೀದಿಯಲ್ಲಿ ಅಲೆದಾಡುತ್ತಿದ್ದ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ.
ತಾಯಿ-ಮಗು ರಸ್ತೆಯಲ್ಲಿ ಓಡಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಪೊಲೀಸ್ ಸಿಬ್ಬಂದಿಯು ತಾಯಿ-ಮಗುವನ್ನು ಪತ್ತೆಹಚ್ಚಿ ಆಕೆಯ ತವರು ಬಳ್ಳಾರಿಗೆ ತೆರಳಲು ಸಹಾಯ ಮಾಡಿದ್ದಾರೆ.
ಶಿವರಾಜ್ ಮತ್ತು ಅಂಜಲಿ ದಂಪತಿಗೆ 6 ವರ್ಷದ ಹುಲಿಗೆಮ್ಮ ಮತ್ತು 3 ವರ್ಷದ ಮಕ್ಕಳಿದ್ದಾರೆ. ಬಳ್ಳಾರಿಯಿಂದ ಕೂಲಿ ಕೆಲಸಕ್ಕೆ ಜೋಗದ ಎಸ್‌ಎನ್‌ಸಿ ಕಂಪನಿಗೆ ಆಗಮಿಸಿದ್ದರು. ಕಾರಣಾಂತರದಿಂದ ಕಾರ್ಗಲ್ ಪೇಟೆಗೆ ದಂಪತಿ ಆಗಮಿಸಿದ್ದ ಸಂದರ್ಭದಲ್ಲಿ ಮಗುವಿನ ಮೇಲೆ ಬಟ್ಟೆ ಇರಲಿಲ್ಲ. ಇದನ್ನು ಸಾರ್ವಜನಿಕರು ಕಂಡು ಮರುಗಿ ಪೊಲೀಸ್ ಇಲಾಖೆ ಗಮನಕ್ಕೆ ತಂದಿದ್ದರು. ಪೊಲೀಸ್ ಸಿಬ್ಬಂದಿ ಅಣ್ಣಪ್ಪ ಹಾಗೂ ಪುರುಷೋತ್ತಮ, ಪಪಂ ಮುಖ್ಯಾಧಿಕಾರಿ ಎಂ.ಕೆ.ಸುರೇಶ್, ಎಸ್‌ಎನ್‌ಸಿ ಕಂಪನಿ ಅಧಿಕಾರಿಗಳು ಮಗುವಿಗೆ ಬಟ್ಟೆ ನೀಡಿ, ಊಟ ಕೊಡಿಸಿ, ಹಣ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.