ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿವಿ ಆವರಣದಲ್ಲಿ ಆಯೋಜಿಸಿದ್ದ ಜಾನಪದ ಕಲಾ ಉತ್ಸವದಲ್ಲಿ ಅಮೃತೇಶ್ವರಿ ಕಲಾ ತಂಡದ ಡೊಳ್ಳು ಕುಣಿತ ಪ್ರದರ್ಶನ. 
ಶಿವಮೊಗ್ಗ

ಜಾನಪದ ಕಲೆಗಳ ರಕ್ಷಣೆ ಎಲ್ಲರ ಹೊಣೆ | Cultural event

ಆನಂದಪುರ: ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್ ತಿಳಿಸಿದರು.
ವಿವಿ ಆವರಣದಲ್ಲಿ ಕಣ್ಣೂರಿನ ಕಣ್ಣೇಶ್ವರ ಜಾನಪದ ಕಲಾಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾನಪದ ಕಲಾ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಚೀನ ಕಾಲದಿಂದ ಜನರ ಜೀವನದಲ್ಲಿ ಹಾಸುಹೊಕ್ಕಾಗಿರುವ ಜಾನಪದ ಕಲೆಗಳನ್ನು ಜೀವಂತವಾಗಿಡಬೇಕು ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಟಾಕಪ್ಪ ಮಾತನಾಡಿ, ಜಾನಪದ ತಾಯಿ ಬೇರು ಇದ್ದಂತೆ. ಕಲೆಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ಕಲಿಸುವ ಅಗತ್ಯವಿದೆ  ಎಂದರು.
ಸಾಗರ ಮಂಜಪ್ಪ ಮತ್ತು ತಂಡದವರಿಂದ ಡೊಳ್ಳು ಕುಣಿತ, ತರೀಕೆರೆ ಪಲ್ಲವಿ ಮತ್ತು ತಂಡದವರಿಂದ ವೀರಗಾಸೆ, ಗುಡ್ಡಪ್ಪ ಜೋಗಿ ಮತ್ತು ತಂಡದಿಂದ ಜೋಗಿ ಪದ, ಅಮೃತೇಶ್ವರಿ ಕಲಾ ತಂಡದಿಂದ ಮಹಿಳಾ ಡೊಳ್ಳು ಕುಣಿತ, ಕಣ್ಣೂರು ಮಾರಿಕಾಂಬ ಮಂಡಳಿಯಿಂದ ಭಜನೆ, ಬಾಗಲಕೋಟೆ ಮಂಜುಳಾ ಮತ್ತು ತಂಡದಿಂದ ಲಂಬಾಣಿ ನೃತ್ಯ, ಮಂಡ್ಯದ ಕೆ.ಬಿ.ಸ್ವಾಮಿ ಮತ್ತು ತಂಡದವರಿಂದ ಪೂಜಾ ಕುಣಿತ, ಕಡೂರು ಎಚ್.ಎಂ.ರವಿ ತಂಡದವರಿಂದ ನಂದಿ ಧ್ವಜ, ಮೈಸೂರು ಜಗದೀಶ್ ಮತ್ತು ತಂಡದವರಿಂದ ಸೋಮನ ಕುಣಿತ, ಇರುವಕ್ಕಿ ಕೃಷಿ ವಿವಿ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ ಪ್ರದರ್ಶನ ನಡೆಯಿತು.
ಸಾಗರ ತಾಲೂಕು ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ, ಕಣ್ಣೇಶ್ವರ ಜನಪದ ಕಲಾ ಸಂಘದ ಅಧ್ಯಕ್ಷ ಟೀಕಪ್ಪ , ಕಣ್ಣೂರು ಗ್ರಾಮ ಸುಧಾರಣಾ ಸಮಿತಿ ಅಧ್ಯಕ್ಷ ನಾಗರಾಜ್ ಸಂಗೀ, ಕೃಷಿ ವಿವಿ ಉಪನ್ಯಾಸಕ ಡಾ. ನಾರಾಯಣ ಮಾವರ್ಕರ್, ಕೆ.ಸಿ.ಶಶಿಧರ್, ರವಿಕುಮಾರ್, ಗಣಪತಿ, ಮಾನ್ಯಾ ಪಾಟೀಲ್, ರಕ್ಷಿತಾ ಇತರರಿದ್ದರು.