ಶಿವಮೊಗ್ಗದ ಅರಣ್ಯ ಇಲಾಖೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಎಸಿಎಫ್ ಕಿರಣ್ ಅಂಗಡಿ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲಾತಿ ಪರಿಶೀಲಿದರು.
- ಆದಾಯ ಮೀರಿ ಆಸ್ತಿ ಗಳಿಕೆ ಮಾಡಿರುವ ಆರೋಪ
- ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್ ನೇತೃತ್ವದಲ್ಲಿ ಕಾರ್ಯಾಚರಣೆ
- ಬ್ಯಾಂಕ್, ಸ್ಥಿರಾಸ್ತಿ, ಹೂಡಿಕೆಗಳಿಗೆ ಸಂಬಂಧಿಸಿದ ದಾಖಲೆ ಪರಿಶೀಲನೆ
ಶಿವಮೊಗ್ಗ: ಆದಾಯ ಮೀರಿ ಆಸ್ತಿ ಗಳಿಕೆ ಮಾಡಿರುವ ಆರೋಪದ ಹಿನ್ನೆಲೆ ಶಿವಮೊಗ್ಗದ ಅರಣ್ಯ ಇಲಾಖೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (Assistant Conservator of Forests) (ಎಸಿಎಫ್) ಕಿರಣ್ ಅಂಗಡಿ ಅವರ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು(Lokayukta officials) ಬುಧವಾರ ದಾಳಿ ನಡೆಸಿದ್ದು, 4 ಕೋಟಿ ರೂ.ಗೂ ಅಧಿಕ ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿ ಪತ್ತೆಯಾಗಿದೆ.
ನಗರದ ಆಲ್ಕೊಳ ವೃತ್ತದ ಬಳಿ ಇರುವ ಸಾಮಾಜಿಕ ಅರಣ್ಯ ವಲಯ ಕಚೇರಿ ಪಕ್ಕದ ಸಂಶೋಧನಾ ವಿಭಾಗ(Research Division)ದ ಎಸಿಎಫ್ ಕಚೇರಿ, ಧಾರವಾಡ ದೊಡ್ಡನಾಯಕನಕೊಪ್ಪದ ಕೆಎಚ್‌ಬಿ ಲೇಔಟ್‌ನಲ್ಲಿನ ಮನೆ, ಧಾರವಾಡ ಬೇಲೂರು ಕೈಗಾರಿಕಾ ವಸಾಹತಿ ಪ್ರದೇಶದಲ್ಲಿ ಆಂಟೊಜೆನ್ ಇಂಜಿನಿಯರಿಂಗ್ ಪ್ರೈ.ಲಿ. ಹಾಗೂ ಲಕ್ನೋದಲ್ಲಿರುವ ಅದರ ಶಾಖೆ ಸೇರಿ ಐದು ಕಡೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಬೆಳಗ್ಗೆಯಿಂದಲೇ ಅಧಿಕಾರಿಗಳು ಪ್ರಮುಖ ಕಡತಗಳು ಹಾಗೂ ದಾಖಲೆಗಳ ಪರಿಶೀಲನೆಯಲ್ಲಿ ನಡೆಸಿದರು. ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ(Lokayukta SP M.S. Kaulapure) ಮಾರ್ಗದರ್ಶನ ಮತ್ತು ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ರುದ್ರೇಶ್ ಸೇರಿ ಹತ್ತಕ್ಕೂ ಅಧಿಕ ಅಧಿಕಾರಿಗಳು ಮತ್ತು ಸಿಬ್ಬಂದಿ ಒಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿತು.
ಕಿರಣ್ ಅಂಗಡಿ ಅವರು ತಮ್ಮ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ದಾಳಿ ವೇಳೆ 1.50 ಕೋಟಿ ರೂ. ಮೌಲ್ಯದ ಮನೆ, ಒಂದು ಎಕರೆ ಕೃಷಿ ಭೂಮಿ, 13,044 ರೂ. ನಗದು, 4,92,500 ರೂ. ಮೌಲ್ಯದ ಚಿನ್ನಾಭರಣ, 52 ಸಾವಿರ ರೂ. ಮೌಲ್ಯದ ಬೆಳ್ಳಿ ಆಭರಣ, 33,94,190 ರೂ. ಮೌಲ್ಯದ ಇತರೆ ಆಸ್ತಿ ಸೇರಿದಂತೆ ಒಟ್ಟಾರೆ 42.36 ಲಕ್ಷ ರೂ. ಮೌಲ್ಯದ ಚರಾಸ್ತಿ ಪತ್ತೆಯಾಗಿದೆ.
ಪತ್ನಿ ನಂದಾ ಅಂಗಡಿ ಪಾಲುದಾರರಾಗಿರುವ ಆಂಟೊಜೆನ್ ಇಂಜಿನಿಯರಿಂಗ್ ಪ್ರೈ.ಲಿ.(Ontogen Engineering Pvt.) ಹಾಗೂ ಲಕ್ನೋ ಶಾಖೆ ಮೌಲ್ಯ ಇನ್ನೂ ಬಹಿರಂಗಗೊಳ್ಳಬೇಕಿದ್ದು, ಒಟ್ಟಾರೆ ಮೌಲ್ಯ 4 ಕೋಟಿ ರೂ.ಗೂ ಅಧಿಕವಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.