ವಿದ್ಯುತ್ ಖಾಸಗೀಕರಣ ವಿರೋಧಿಸಿ ಶಿರಾಳಕೊಪ್ಪದಲ್ಲಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಈರಣ್ಣ ಪ್ಯಾಟಿ, ರಾಮಣ್ಣ ಕೆಂಚಳ್ಳಿ, ಎಚ್.ಎಸ್.ಮುಲ್ಲಾ, ರಾಜು ಮುಗಳಿಕೊಪ್ಪ, ರಾಜು ಹೊಸಮನೆ, ಹಾಲಪ್ಪ ಗೌಡ ಇತರರಿದ್ದರು.
ಶಿರಾಳಕೊಪ್ಪ: ರಾಜ್ಯದ 19 ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜನ್ನು ಖಾಸಗೀಕರಣ ಮಾಡುವ ರಾಜ್ಯ ಸರ್ಕಾರದ ನಿರ್ಧಾರ ಸಾರ್ವಜನಿಕ ವಿರೋಧಿ ನೀತಿ ಎಂದು ಆರೋಪಿಸಿ ರಾಜ್ಯ ರೈತ ಸಂಘದ ಪ್ರಮುಖರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ ರೈತ ವಿರೋಧಿ ನೀತಿಗಳನ್ನು ಅನುಸರಿಸಬಾರದು. ಅಂತಹ ಕ್ರಮಗಳಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಸರ್ಕಾರ ಕೂಡಲೇ ಖಾಸಗೀಕರಣದ ನಿರ್ಧಾರ ಹಿಂಪಡೆಯಬೇಕು. ಟಾಟಾ ಕಂಪನಿಯ ಪ್ರಸ್ತಾವನೆಗೆ ಒಪ್ಪಿಗೆ ನೀಡಬಾರದು. ನಿರ್ಧಾರ ಬದಲಿಸದಿದ್ದರೆ ವಿಧಾನಸೌಧದ ಎದುರು ಮುಖ್ಯಮಂತ್ರಿ ಅವರಿಗೆ ಘೇರಾವ್ ಹಾಕಲಾಗುವುದು ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಈರಣ್ಣ ಪ್ಯಾಟಿ ಎಚ್ಚರಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ಪುಟ್ಟನಗೌಡ ಮಾತನಾಡಿ, ಕರೊನಾ ಸಂದರ್ಭ ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು ರೈತ ಸಂಘಟನೆಗಳ ಹೋರಾಟದಿಂದ ಹಿಂಪಡೆಯುವಂತೆ ಮಾಡಲಾಯಿತು. ಅದೇ ರೀತಿ ಮತ್ತೊಂದು ಹೋರಾಟಕ್ಕೆ ನಾವು ಸಜ್ಜಾಗಬೇಕಿದೆ. ಸರ್ಕಾರ ಮೊದಲ ಹಂತದಲ್ಲಿ 19 ಜಿಲ್ಲೆಗಳನ್ನು ಮಾತ್ರ ಆಯ್ಕೆ ಮಾಡಿರುವುದು ಅದರ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಆರ್ಥಿಕವಾಗಿ ಮುಂದುವರಿದ ಜಿಲ್ಲೆಗಳನ್ನೇ ಗುರಿಯಾಗಿಸಿಕೊಂಡಿರುವ ಈ ಯೋಜನೆಯಿಂದ ರೈತರಷ್ಟೇ ಅಲ್ಲ, ಸಾರ್ವಜನಿಕರಿಗೂ ಆರ್ಥಿಕ ಹೊರೆ ಬೀಳಲಿದೆ. ಮುಖ್ಯಮಂತ್ರಿಗಳು ಈ ಪ್ರಸ್ತಾವನೆಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.
ಹಾವೇರಿ ಜಿಲ್ಲಾ ರೈತೋತ್ಸವ ಸಮಿತಿ ಅಧ್ಯಕ್ಷ ಎಚ್.ಎಸ್.ಮುಲ್ಲಾ ಮಾತನಾಡಿ, ಇಲ್ಲಿಂದ ಆರಂಭವಾಗುವ ರೈತ ಹೋರಾಟ ರಾಜ್ಯಾದ್ಯಂತ ಹೊಸ ಚಳವಳಿಗೆ ಮುನ್ನುಡಿ ಬರೆಯಲಿದೆ. ಸರ್ಕಾರ ಎಚ್ಚೆತ್ತುಕೊಂಡು ಈ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಸೊರಬ ರಸ್ತೆಯಲ್ಲಿ ಮಾನವ ಸರಪಳಿ ರಚಿಸಲಾಯಿತು. ನಂತರ ಎಚ್.ಕೆ.ರಸ್ತೆ ಮೂಲಕ ನಾಡ ಕಚೇರಿಗೆ ತೆರಳಿ ಉಪ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ರೈತ ಸಂಘದ ತಾಲೂಕು ಅಧ್ಯಕ್ಷ ರಾಜು ಮುಗಳಿಕೊಪ್ಪ, ಪ್ರಧಾನ ಕಾರ್ಯದರ್ಶಿ ರಾಜು ಹೊಸಮನೆ, ಜಿಲ್ಲಾ ಅಧ್ಯಕ್ಷ ಹಾಲಪ್ಪ ಗೌಡ, ಶಿವಪ್ಪ, ವಿಕ್ರಂ ಗೌಡ, ಪ್ರದೀಪ್, ಸುಧೀರ್, ದೀಪು ಇತರರಿದ್ದರು.