ನರೇಗಾ ಬಚಾವೋ ಆಂದೋಲನದ ಭಾಗವಾಗಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹದಲ್ಲಿ ಆರ್.ಎಂ.ಮಂಜುನಾಥ ಗೌಡ ಮಾತನಾಡಿದರು. ಆರ್.ಪ್ರಸನ್ನಕುಮಾರ್, ಬಲ್ಕಿಶ್ ಬಾನು, ಎಚ್.ಎಸ್.ಸುಂದರೇಶ್, ಶ್ವೇತಾ ಬಂಡಿ, ಎನ್.ರಮೇಶ್, ಜಿ.ಪಲ್ಲವಿ, ಕೆ.ಚೇತನ್, ಹರ್ಷಿತ್ ಗೌಡ, ಮಧುಸೂದನ್, ಎಚ್.ಸಿ.ಯೋಗೇಶ್ ಇದ್ದರು.
- ಕಾಂಗ್ರೆಸ್ ಮುಖಂಡರ ಆಗ್ರಹ
- ಗಾಂಧಿಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ
- ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ
ಶಿವಮೊಗ್ಗ: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ (plan) ಯ ಹೆಸರನ್ನು ಜಿ ರಾಮ್ ಜಿ ಎಂದು ಬದಲಾಯಿಸಿರುವ ಕೇಂದ್ರ ಸರ್ಕಾರ (govermnet) ಗಾಂಧೀಜಿಗೆ ಅವಮಾನ ಮಾಡಿದೆ. ಯೋಜನೆಯಿಂದ ಗಾಂಧೀಜಿ ಹೆಸರನ್ನು ಕೈ ಬಿಡುವ ಮೂಲಕ ರಾಷ್ಟ್ರಪಿತನಿಗೆ ಅವಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ (congress) ಮುಖಂಡರು ಮಂಗಳವಾರ ನಗರದ ಗಾಂಧಿಪಾರ್ಕ್‌ನ ಗಾಂಧಿ ಪ್ರತಿಮೆ ಎದುರು ಬೆಳಗ್ಗೆಯಿಂದ ಸಂಜೆವರೆಗೆ ಉಪವಾಸ ಸತ್ಯಾಗ್ರಹ ನಡೆಸಿದರು.
ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ಮುಖಂಡರು, ಯೋಜನೆಯ ಹೆಸರು ಬದಲಾಯಿಸಿದ್ದು ಮಾತ್ರವಲ್ಲದೆ ಅದರ ಉದ್ದೇಶಗಳನ್ನೂ ಮೊಟಕುಗೊಳಿಸಲಾಗಿದೆ. ಗಾಂಧೀಜಿ ಹೆಸರನ್ನು ಕೈ ಬಿಟ್ಟಿರುವುದು ದ್ವೇಷ ರಾಜಕಾರಣದ ಭಾಗವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಯೋಜನೆಯ ನೆಪದಲ್ಲಿ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ. ಬಿಜೆಪಿಗೆ ಆರಂಭದಿಂದಲೂ ಗಾಂಧೀಜಿಯವರ ಮೇಲೆ ದ್ವೇಷ ಭಾವನೆಯಿದೆ. ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಯೋಜನೆಯ ಸ್ವರೂಪವನ್ನೇ ಎನ್‌ಡಿಎ ಸರ್ಕಾರ ಬದಲಾಯಿಸಿದೆ ಎಂದು ದೂರಿದರು.
ಈ ಯೋಜನೆಯಲ್ಲಿ ಮಾಡಿರುವ ಬದಲಾವಣೆಗಳಿಂದ ನಿರುದ್ಯೋಗದ ಪ್ರಮಾಣ ಹೆಚ್ಚಾಗಲಿದೆ. ಕನಿಷ್ಠ ವೇತನದ ರಕ್ಷಣೆಯಿಲ್ಲದೆ ಕಾರ್ಮಿಕರು ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ. ಇದರಿಂದ ಕಾರ್ಮಿಕರ ಶೋಷಣೆಯಾಗುತ್ತದೆ. ಉದ್ಯೋಗದಲ್ಲಿ ಮಹಿಳೆಯರ ಪಾಲುದಾರಿಕೆ ಇಳಿಮುಖವಾಗುತ್ತದೆ. ಗ್ರಾಪಂಗಳ ಅಧಿಕಾರ ಮೊಟಕುಗೊಳಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯೋಜನೆಯ ಬದಲಾವಣೆ ಬಗ್ಗೆ ಸಂಸತ್‌ನಲ್ಲಿ ಸೂಕ್ತ ಚರ್ಚೆ ನಡೆಸದೆ, ರಾಜ್ಯಗಳ ಅಭಿಪ್ರಾಯ ಪಡೆಯದೆ ನಿರ್ಧಾರ ಕೈಗೊಳ್ಳಲಾಗಿದೆ. ಗ್ರಾಮೀಣ ಯೋಜನೆಯನ್ನು ದೇಶದ ರಾಜಧಾನಿಯಿಂದಲೇ ನಿಯಂತ್ರಿಸುವ ಹುನ್ನಾರವನ್ನು ಎನ್‌ಡಿಎ ಸರ್ಕಾರ ಮಾಡಿದೆ ಎಂದು ಟೀಕಿಸಿದರು.
ನರೇಗಾ ಯೋಜನೆಯನ್ನು ಅದರ ಮೂಲ ಸ್ವರೂಪದಲ್ಲೇ ಉಳಿಸಬೇಕು. ಗ್ರಾಪಂಗಳ ಆಡಳಿತದ ಹಕ್ಕನ್ನು ಮರುಸ್ಥಾಪಿಸಬೇಕು. ನಮ್ಮದೇ ಯೋಜನೆ, ನಮ್ಮದೇ ಆಡಳಿತ, ಉದ್ಯೋಗ ಎನ್ನುವ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯನ್ನು ಈಗಿರುವ ಸ್ವರೂಪದಲ್ಲೇ ಮುಂದುವರಿಸಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ವೇತಾ ಬಂಡಿ, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್‌ಬಾನು, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ನಿಗಮ ಮಂಡಳಿಗಳ ಅಧ್ಯಕ್ಷರಾದ ಜಿ.ಪಲ್ಲವಿ, ಕೆ.ಚೇತನ್, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಮುಂತಾದವರು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.