ಡಾ.ಸಣ್ಣರಾಮ 
ಶಿವಮೊಗ್ಗ

ಬಂಜಾರ ಸಂಸ್ಕೃತಿಯ ಸಂರಕ್ಷಣೆ ಅಗತ್ಯ

ಭದ್ರಾವತಿ: ಬಂಜಾರ ಸಮುದಾಯದ ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆ ಇಂದಿನ ಅಗತ್ಯ. ಒಂದು ಭಾಷೆ ಅಳಿದರೆ ಅದರೊಂದಿಗೆ ಒಂದು ಸಂಸ್ಕೃತಿಯೂ ಅಳಿದು ಹೋಗುತ್ತದೆ ಎಂದು ಚಿಂತಕ ಡಾ. ಸಣ್ಣರಾಮ ಹೇಳಿದರು.
ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಸಂತ ಸೇವಾಲಾಲ್ ಮತ್ತು ದುರ್ಗಾಂಬ ಸೇವಾ ಸಮಿತಿ ಹಾಗೂ ನೆಲ್ಲಿಸರ ತಾಂಡದ ಸ್ವಸಹಾಯ ಮಹಿಳಾ ಸಂಘಗಳ ಸಹಯೋಗದಲ್ಲಿ ತಾಲೂಕಿನ ನೆಲ್ಲಿಸರ ತಾಂಡದ ಸೇವಾಲಾಲ್ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ‘ಸಂತ ಶ್ರೀ ಸೇವಾಲಾಲ್ ಪರಂಪರೆ ಮತ್ತು ಪ್ರಸ್ತುತತೆ’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಬಂಜಾರ ಬುಡಕಟ್ಟು ಸಮುದಾಯ ತನ್ನದೇ ಆದ ವಿಶಿಷ್ಟ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹೊಂದಿದೆ. ಮರಾಠಿ, ಹಿಂದಿ, ಗುಜರಾತಿ ಹಾಗೂ ರಾಜಸ್ಥಾನಿ ಭಾಷೆಗಳೊಂದಿಗೆ ಸಾಮ್ಯತೆ ಹೊಂದಿದ್ದರೂ ಬಂಜಾರ ಭಾಷೆ ತನ್ನದೇ ಆದ ಸ್ವರೂಪವನ್ನು ಉಳಿಸಿಕೊಂಡಿದೆ. ಅದರಲ್ಲಿರುವ ಮೌಖಿಕ ಸಾಹಿತ್ಯ ಸಂಪತ್ತು ಅತ್ಯಂತ ಶ್ರೀಮಂತವಾಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಜನರ ಮೇಲಿದೆ ಎಂದು ಹೇಳಿದರು.
ಸಂತ ಸೇವಾಲಾಲ್ ಅವರನ್ನು ಕೇವಲ ಪೂಜಿಸುವುದಕ್ಕೆ ಸೀಮಿತಗೊಳಿಸದೆ ಅವರು ಪ್ರತಿಪಾದಿಸಿದ ಸತ್ಯ, ಅಹಿಂಸೆ, ಸರಳ ಜೀವನ ಹಾಗೂ ಸಮಾಜಸೇವೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು·ಎಂದು ತಿಳಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಶ್ರೀಮದ್ ರಂಭಾಪುರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಪ್ರೊ. ಎಸ್.ಎಂ.ಮುತ್ತಯ್ಯ ‘ಬುಡಕಟ್ಟು ಸಾಂಸ್ಕೃತಿಕ ನಾಯಕರ ಸ್ವರೂಪ’ ಕುರಿತು ಉಪನ್ಯಾಸ ನೀಡಿ, ಪ್ರತಿಯೊಂದು ಸಮುದಾಯದ ಸಾಂಸ್ಕೃತಿಕ ನಾಯಕರೂ ತಮ್ಮ ಜನಾಂಗದ ರಕ್ಷಣೆ, ಅಭಿವೃದ್ಧಿ ಹಾಗೂ ಮಾನವೀಯ ಮೌಲ್ಯಗಳ ಬೆಳವಣಿಗೆಗಾಗಿ ಶ್ರಮಿಸಿದ್ದಾರೆ. ಯಾವುದೇ ಸಾಮ್ರಾಜ್ಯ ನಿರ್ಮಾಣಕ್ಕಾಗಿ ಅಲ್ಲ. ಸಮಾಜದ ಒಳಿತಿಗಾಗಿ ಬದುಕಿದ ಇಂತಹ ನಾಯಕರ ಆದರ್ಶಗಳು ಇಂದಿಗೂ ಪ್ರಸ್ತುತ ಎಂದು ಹೇಳಿದರು.
ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಸದಸ್ಯ ಸಂಚಾಲಕ ಡಾ. ಎಂ.ರವಿ ನಾಯ್ಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿವಿಧ ಸಂಘಟನೆಗಳ ಮುಖಂಡರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.