ಕುವೆಂಪುನಗರದ ಎನ್‌ಇಎಸ್ ಬಡಾವಣೆ ಉದ್ಯಾನದಲ್ಲಿ ತೆರೆದ ಜಿಮ್ ಹಾಗೂ ಫೆನ್ಸಿಂಗ್ ಅಭಿವೃದ್ಧಿ ಕಾಮಗಾರಿಯನ್ನು ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಉದ್ಘಾಟಿಸಿದರು. ಚೇತನ್ ಗೌಡ, ಕೆ.ಎನ್.ಪ್ರಸನ್ನ, ರಮೇಶ್ ಬಾಬು ಇತರರಿದ್ದರು. 
ಶಿವಮೊಗ್ಗ

ಸೂಡಾದಿಂದ ಕೆರೆ, ಪಾರ್ಕ್ ಅಭಿವೃದ್ಧಿಗೆ ಪ್ರಾಶಸ್ತ್ಯ । NES Layout

ನವೀನ ಬಿ.ಎಂ

ಪ್ರಮುಖ ಮುಖ್ಯಾಂಶಗಳು

  • ಚನ್ನಮುಂಭಾಪುರ ಕೆರೆ ಅಭಿವೃದ್ಧಿಗೆ 5 ಕೋಟಿ ರೂ. ಬಿಡುಗಡೆ
  • ಕುವೆಂಪು ನಗರದಲ್ಲಿ ತೆರೆದ ಜಿಮ್ ಉದ್ಘಾಟನೆ
  • ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿಕೆ
ಶಿವಮೊಗ್ಗ: ಯಾವುದೇ ಪಕ್ಷಪಾತವಿಲ್ಲದೆ ನಗರದ ಅಭಿವೃದ್ಧಿ ನಮ್ಮ ಉದ್ದೇಶ. ಕೆರೆ(Lake) ಹಾಗೂ ಉದ್ಯಾನ(Park)ಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ಹಸಿರೀಕರಣ ಮಾಡಲು ಮೊದಲ ಪ್ರಾಶಸ್ತ್ಯ ನೀಡಲಾಗುವುದು ಎಂದು ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.
ಕುವೆಂಪುನಗರದ ಎನ್‌ಇಎಸ್ ಬಡಾವಣೆ(NES Layout)ಯ ‘ಎ’ ಬ್ಲಾಕ್‌ನ ಉದ್ಯಾನದಲ್ಲಿ ನಗರಾಬಿವೃದ್ಧಿ ಪ್ರಾಧಿಕಾರದ 25 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿದ ತೆರೆದ ಜಿಮ್(Open Gym) ಹಾಗೂ ಫೆನ್ಸಿಂಗ್ (Fencing) ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿ ಮಾತನಾಡಿದ ಅವರು, ಶಿವಮೊಗ್ಗ ನಗರದಲ್ಲಿ ಬಿಸಿಲಿನ ತಾಪಮಾನ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದೆ. ಹಾಗಾಗಿ ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕಿನಲ್ಲಿ 25 ಕೆರೆಗಳ ಅಭಿವೃದ್ಧಿಗೆ ಮುಂದಾಗಿದ್ದು, ಮೊದಲ ಹಂತದಲ್ಲಿ 8 ಕೆರೆಗಳ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ ಎಂದರು.
ಚನ್ನಮುಂಭಾಪುರ(Channamumbapura) ಗ್ರಾಮದ ಕೆರೆ ಅಭಿವೃದ್ಧಿಗೆ ಪ್ರಾಧಿಕಾರದಿಂದ 5 ಕೋಟಿ ರೂ. ಬಿಡುಗಡೆ ಮಾಡಿದ್ದು, ಈ ಅನುದಾನದಲ್ಲಿ ಕೆರೆಯ ನೀರಿನ ಸಂಗ್ರಮ ಸಾಮರ್ಥ್ಯ ಹೆಚ್ಚಿಸುವುದಲ್ಲದೆ, ಕೆರೆಗೆ ತ್ಯಾಜ್ಯ ಹರಿದುಬಾರದಂತೆ ಸುತ್ತಲೂ ಡ್ರೈನೇಜ್(Drainage) ನಿರ್ಮಿಸಲಾಗುವುದು. ಜತೆಗೆ ವಾಕಿಂಗ್ ಪಾಥ್,  ಲೈಟಿಂಗ್, ಸ್ಟೋನ್ ಬೆಂಚ್, ಫೆನ್ಸಿಂಗ್, ಆಟಿಕೆಗಳು ಹಾಗೂ ಜಿಮ್ ಉಪಕರಣಗಳನ್ನು ಅಳವಡಿಸಲಾಗುತ್ತದೆ. ಸುತ್ತಲೂ ಗಿಡಗಳನ್ನು ನೆಟ್ಟು ಈ ಭಾಗದ ನಾಗರಿಕರ ಆರೋಗ್ಯಕರ ವಾಯುವಿಹಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ಧೀರರಾಜ್ ಹೊನ್ನವಿಲೆ ಮಾತನಾಡಿ, ಸುಂದರೇಶ್ ಅವರ ಅವಧಿಯಲ್ಲೇ ಉದ್ಯಾನದ ಅಭಿವೃದ್ಧಿಗೆ ಗುದ್ದಲಿಪೂಜೆ ನೆರವೇರಿತ್ತು. ಇದೀಗ ಅವರಿಂದಲೇ ಉದ್ಘಾಟನೆ ಆಗಿದೆ. ಪ್ರಾಧಿಕಾರದಿಂದ 7 ಕೋಟಿ ರೂ. ಅನುದಾನದಲ್ಲಿ ನಮ್ಮ ವಾರ್ಡ್‌ನಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ರಾಜ್ಯ ಜವಳಿ ಮತ್ತು ವಿದ್ಯುತ್ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಗೌಡ, ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎನ್.ಪ್ರಸನ್ನ, ಗೌರವಾಧ್ಯಕ್ಷ ರಮೇಶ್ ಬಾಬು, ಕಾರ್ಯದರ್ಶಿ ಡಾ. ರಾಜ್‌ಪ್ರಕಾಶ್, ವೇದಾನಂದ್, ನಮೃತ್ ಗೌಡ, ಪ್ರಕಾಶ್ ಇತರರಿದ್ದರು.