ಕುಂ.ವೀರಭದ್ರಪ್ಪ ಅನುವಾದಿಸಿದ ಪ್ರಣಯ ಹಂಪಿ ಕೃತಿಯನ್ನು ಲೇಖಕಿ ಸಬಿತಾ ಬನ್ನಾಡಿ ಬಿಡುಗಡೆ ಮಾಡಿದರು. ಪ್ರೊ. ಎಚ್.ಎಸ್.ನಾಗಭೂಷಣ, ಸುನೀಲ್‌ಕುಮಾರ್, ಮಾರುತಿ ಪೌರೋಹಿತಂ ಇದ್ದರು.
- ಸಾಹಿತಿ ಕುಂ.ವೀರಭದ್ರಪ್ಪ ಕಾದಂಬರಿ
ಶಿವಮೊಗ್ಗ: ಸಾಹಿತಿ ಕುಂ.ವೀರಭದ್ರಪ್ಪ (veerabadrappa) ರಚಿಸಿದ ದೇವರ ಹೆಣ ಕತೆಯು ಕಥಾ ಪ್ರಕಾರಕ್ಕೆ ಕೊಟ್ಟ ಅಮೂಲ್ಯ ಕೊಡುಗೆ (contribution) ಎಂದು ಲೇಖಕಿ ಡಾ. ಸಬಿತಾ (sabita) ಬನ್ನಾಡಿ ಅಭಿಪ್ರಾಯಪಟ್ಟರು.
ಬಹುಮುಖಿ ಮತ್ತು ಸುವ್ವಿ ಪಬ್ಲಿಕೇಶನ್‌ನಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕುಂ. ವೀರಭದ್ರಪ್ಪ ಅನುವಾದಿಸಿದ ಮಾರುತಿ ಪೌರೋಹಿತಂ ಅವರ ಅರೆ ಐತಿಹಾಸಿಕ ತೆಲುಗು ಕಾದಂಬರಿ ‘ಪ್ರಣಯ ಹಂಪಿ’ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಕಾದಂಬರಿ ಯುದ್ಧಕಾಲದ ಪ್ರೇಮ ಕಥಾನಕವಾಗಿದೆ. ಕುಂವೀ ಅವರು ಈ ಕಾದಂಬರಿಯಲ್ಲಿ ಅನಾಮಧೇಯ ವ್ಯಕ್ತಿಗಳ ಪರಿಚಯ ಮಾಡಿಕೊಡುತ್ತಾರೆ ಎಂದರು.
ರಾಜರುಗಳೆಂದರೆ ರಕ್ತಪಿಪಾಸುಗಳು, ತೆರಿಗೆಕೋರರಾಗಿದ್ದರು. ವೇಶ್ಯೆಯ ಮೇಲೂ ತೆರಿಗೆ ಹಾಕುತ್ತಿದ್ದರು. ವೇಶ್ಯೆಯರ ಬದುಕು ಅಸಹನೀಯವಾಗಿತ್ತು ಎಂಬುದನ್ನು ಕಾದಂಬರಿಯಲ್ಲಿ ವಿವರಿಸಿದ್ದಾರೆ ಎಂದು ಹೇಳಿದರು.
ಸಾಹಿತಿ ಡಾ. ಎಚ್.ಎಸ್.ನಾಗಭೂಷಣ ಮಾತನಾಡಿ, ಕುಂ.ವೀರಭದ್ರಪ್ಪ ಅವರು ಭಾಷೆಯನ್ನು ಬಳಸುವ ಕಲೆ ಅದ್ಭುತವಾದುದು. ಇದರಲ್ಲಿನ ಐತಿಹಾಸಿಕ ಅಂಶಗಳ ಅನುವಾದ ಅಷ್ಟು ಸುಲಭವಲ್ಲ. ಲೇಖಕ ಭಾಷೆಯಲ್ಲೂ ಪರಕಾಯ ಪ್ರವೇಶ ಮಾಡಿದ್ದಾರೆ. ಅಂಚಿನಲ್ಲಿರುವ ಸಾಮಾನ್ಯ ಜನರನ್ನು ಕಾದಂಬರಿಯ ಕೇಂದ್ರಕ್ಕೆ ತಂದಿದ್ದಾರೆ ಎಂದರು.
ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿ, ತೆಲುಗು ನನ್ನ ಮಾತೃಭಾಷೆಯಲ್ಲ. ಆದರೂ ತೆಲುಗು ಕಲಿತು ಅಲ್ಲಿನ ಕೆಲವು ಲೇಖಕರ ಕೃತಿಗಳನ್ನು ನಾನು ಕನ್ನಡಕ್ಕೆ ಅನುವಾದ ಮಾಡಿದ್ದೇನೆ. ಸುಮಾರು 300 ಕವನಗಳನ್ನು ತೆಲುಗಿನಿಂದ ಕನ್ನಡಕ್ಕೆ ಭಾಷಾಂತರ ಮಾಡಿದ್ದೇನೆ. ಆಂಧ್ರದ ಅನೇಕ ಕಡೆ ಉತ್ತಮ ಕೆಲಸ ಮಾಡಿದ ಬ್ರಿಟಿಷ್ ಅಧಿಕಾರಿಗಳನ್ನು ಇಂದು ದೇವರಂತೆ ಪೂಜಿಸುತ್ತಾರೆ ಎಂದು ತಿಳಿಸಿದರು.
ಮೂಲ ಕೃತಿಕಾರ ಮಾರುತಿ ಪೌರೋಹಿತಂ ಮಾತನಾಡಿ, ಕನ್ನಡ ಭಾಷೆಯ ಜನ ಹೃದಯವಂತರು. ನಾನು ಈ ಕಾದಂಬರಿ ಬರೆಯಲು ಮೂರು ಕಾರಣವಿದೆ. ಇಂದು ಯುವಕರು ಮೆಡಿಕಲ್ ಮತ್ತು ಇಂಜಿನಿಯರಿಂಗ್ ಮಾತ್ರ ಓದುತ್ತಾರೆ. ಆದರೆ ಸಾಹಿತ್ಯ ಯಾರೂ ಓದುತ್ತಿಲ್ಲ. ಹೀಗಾಗಿ ಕಾದಂಬರಿ ಮೂಲಕವಾಗಿ ಸಾಹಿತ್ಯ ಓದಲಿ. ಅದರ ಮೂಲಕ ವಿಜಯನಗರದ ಇತಿಹಾಸ ತಿಳಿಯಲಿ ಎನ್ನುವುದೇ ನನ್ನ ಉದ್ದೇಶವಾಗಿತ್ತು ಎಂದು ಹೇಳಿದರು.
ಪುಸ್ತಕ ಪ್ರಕಾಶಕ ಸುನೀಲ್‌ಕುಮಾರ್ ಮುಂತಾದವರಿದ್ದರು.