ಶಿವಮೊಗ್ಗ: ನಗರದ ಜೆ.ಎಚ್.ಪಟೇಲ್ ಬಡಾವಣೆಯ ವೀರಶೈವ ಸಾಂಸ್ಕೃತಿಕ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ಅ. 25ರಂದು ಬೆಳಗ್ಗೆ 10.30ಕ್ಕೆ ಕೆಳದಿ ಶಿವಪ್ಪನಾಯಕ, ಕೆಳದಿ ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ ಎಂದು ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಎನ್.ಸಜ್ಜನ್ ಹೇಳಿದರು.
2025-26ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ 492 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಾ. ಭೀಮಣ್ಣ ಖಂಡ್ರೆ ಮತ್ತು ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ಮರಣೋತ್ತರವಾಗಿ 2023-24 ಮತ್ತು 2024-25ನೇ ಸಾಲಿನ ಕೆಳದಿ ಶಿವಪ್ಪನಾಯಕ ಪ್ರಶಸ್ತಿ ನೀಡುತ್ತಿದ್ದು, ಭೀಮಣ್ಣ ಖಂಡ್ರೆ ಪರವಾಗಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಸಚಿವ ಈಶ್ವರ ಬಿ.ಖಂಡ್ರೆ ಹಾಗೂ ಶಾಮನೂರು ಶಿವಶಂಕರಪ್ಪ ಪರವಾಗಿ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಗಣೇಶ್ ಪ್ರಶಸ್ತಿ ಸ್ವೀಕರಿಸುವರು ಎಂದರು.
ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಬಿ.ಕೆ.ಸಂಗಮೇಶ್, ಎಸ್.ಎನ್.ಚನ್ನಬಸಪ್ಪ, ಬಿ.ವೈ.ವಿಜಯೇಂದ್ರ, ಎಂಎಲ್ಸಿ ಡಾ. ಧನಂಜಯ ಸರ್ಜಿ, ಮಾಜಿ ಎಂಎಲ್ಸಿ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಎ.ಎಸ್.ವೀರಣ್ಣ ಮತ್ತು ಅಣಬೇರು ರಾಜಣ್ಣ, ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿವಿ ಕುಲಪತಿ ಡಾ. ಎಂ.ವಿ.ಧನಂಜಯ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ದೇಶದಲ್ಲಿ ಬಲಿದಾನ್ ಬ್ಯಾಡಸ್ಜ್ ಪಡೆದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮೇಜರ್ ಡಾ. ದೀಕ್ಷಾ ಸಿ.ಮುದದೇವಣ್ಣನವರ್ ಅವರಿಗೆ ಇದೇ ಮೊದಲ ಬಾರಿ 2025-26ನೇ ಸಾಲಿನ ಕೆಳದಿ ರಾಣಿ ಚನ್ನಮ್ಮ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಪ್ರಶಸ್ತಿ ಪ್ರದಾನ ಮಾಡುವರು ಎಂದರು.
ಮಹಾಸಭಾ ಜಿಲ್ಲಾ ಉಪಾಧ್ಯಕ್ಷೆ ಅನಿತಾ ರವಿಶಂಕರ್, ಬಿ.ಎಂ.ಜಗದೀಶ್, ಬಿ.ಹಾಲಪ್ಪ, ಪ್ರಧಾನ ಕಾರ್ಯದರ್ಶಿ ಬಳ್ಳೇಕೆರೆ ಸಂತೋಷ್, ನಿರ್ದೇಶಕ ಬಿ. ರಾಜಶೇಖರ ಗೌಡ, ಗೀತಾ ರವೀಂದ್ರ ಹಾಗೂ ಜಿಲ್ಲಾ ಯುವ ಘಟಕದ ಸಚಿನ್ ಎಂ.ಪೂಜಾರ್ ಸುದ್ದಿಗೋಷ್ಠಿಯಲ್ಲಿದ್ದರು.