ಸಾಗರದ ಅಕ್ಷಯಸಾಗರ ಸೌಹಾರ್ದ ಸಂಸ್ಥೆಗೆ ಮಂಗಳವಾರ ಭೇಟಿ ನೀಡಿ ಸಂಸ್ಥೆ ವತಿಯಿಂದ ನೀಡಲಾದ ಅಭಿನಂದನೆ ಸ್ವೀಕರಿಸಿ ಮಾಜಿ ಸಹಕಾರಿ ಸಚಿವ ಎಸ್.ಎಸ್.ಪಾಟೀಲ್ ಮಾತನಾಡಿದರು.
ಸಾಗರ: ಸಹಕಾರ ಕ್ಷೇತ್ರಕ್ಕೆ ನಂಬಿಕೆಯೇ ಜೀವಾಳ. ಇದು ಸ್ವತಂತ್ರವಾಗಿ ಉಳಿದಾಗ ಮಾತ್ರ ಸಹಕಾರಿಗಳ ಶಕ್ತಿ ಹೆಚ್ಚುತ್ತದೆ. ಅನಗತ್ಯ ಹಸ್ತಕ್ಷೇಪದಿಂದ ಸಹಕಾರದ ಮೂಲ ತತ್ವಕ್ಕೆ ಕೊಡಲಿಪೆಟ್ಟು ಬೀಳುತ್ತಿದೆ ಎಂದು ಮಾಜಿ ಸಹಕಾರಿ ಸಚಿವ ಎಸ್.ಎಸ್.ಪಾಟೀಲ್ ಹೇಳಿದರು.
ಸಾಗರದ ಅಕ್ಷಯಸಾಗರ ಸೌಹಾರ್ದ ಸಂಸ್ಥೆಗೆ ಮಂಗಳವಾರ ಭೇಟಿ ನೀಡಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರ ಕ್ಷೇತ್ರ ನೀಡುತ್ತಿರುವ ಕೊಡುಗೆ ಅಪಾರ. ನಾನು ಹಳ್ಳಿ ಸೊಸೈಟಿಯಿಂದ ಹಿಡಿದು ಅಪೆಕ್ಸ್ ಬ್ಯಾಂಕ್‌ವರೆಗೆ ವಿವಿಧ ಸ್ಥಾನಮಾನಗಳನ್ನು ನಿಭಾಯಿಸಿದ್ದೇನೆ ಎಂದರು.
ನಾನು ಸಹಕಾರ ಸಚಿವನಾಗಿದ್ದ ಸಂದರ್ಭ 45 ಸಾವಿರ ಸಹಕಾರ ಸಂಸ್ಥೆಗಳು ರಾಜ್ಯದಲ್ಲಿದ್ದವು. ಸೌಹಾರ್ದ ಸಹಕಾರ ಕಾಯ್ದೆಗೆ ತಿದ್ದುಪಡಿ ತಂದು ಸಣ್ಣಪುಟ್ಟ ಸಂಸ್ಥೆಗಳ ಆರ್ಥಿಕ ಶಕ್ತಿ ವೃದ್ಧಿಸುವ ಕೆಲಸ ಮಾಡಲಾಗಿತ್ತು. ಇಂದಿಗೂ ಶೇ.90ರಷ್ಟು ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಕೆಲವರು ಮಾಡುವ ಅವ್ಯವಹಾರದಿಂದ ಕೆಟ್ಟ ಹೆಸರು ಪಡೆಯುವಂತೆ ಆಗಿದೆ. ಆಡಳಿತ ಮಂಡಳಿ ಜತೆ ಅಧಿಕಾರಿ, ಸಿಬ್ಬಂದಿ ಪಾತ್ರ ಪ್ರಮುಖವಾಗಿರುತ್ತದೆ ಎಂದು ತಿಳಿಸಿದರು.
ಸಂಸ್ಥೆಯ ಪ್ರವರ್ತಕ ಟಿ.ಡಿ.ಮೇಘರಾಜ್ ಮಾತನಾಡಿ, ಸಹಕಾರ ಸಂಸ್ಥೆ ಆರಂಭಿಸುವುದು ಸುಲಭ. ಆದರೆ ಷೇರುದಾರರು ಮತ್ತು ಗ್ರಾಹಕರ ವಿಶ್ವಾಸ ಗಳಿಸಿಕೊಂಡು ನಿರಂತರವಾಗಿ ನಡೆಸಿಕೊಂಡು ಹೋಗುವುದು ಸವಾಲಿನ ಕೆಲಸ. 25 ವರ್ಷಗಳ ಹಿಂದೆ ಆರಂಭವಾದ ಸಂಸ್ಥೆ ಈಗ ಹೆಮ್ಮರವಾಗಿದೆ ಎಂದು ಹೇಳಿದರು.
ಅಕ್ಷಯ ಸಾಗರ ಸೌಹಾರ್ದ ಸಂಸ್ಥೆ ಅಧ್ಯಕ್ಷ ದಿನೇಶ್ ಬರದವಳ್ಳಿ ಮಾತನಾಡಿ, ರಾಜ್ಯದ ವಿವಿಧೆಡೆ ಶಾಖೆಗಳನ್ನು ತೆರೆಯುವ ಉದ್ದೇಶ ಹೊಂದಲಾಗಿದೆ ಎಂದರು. ಸಹಕಾರ ಸಂಸ್ಥೆಯ ಕೆ.ಎಂ.ಸೂರ್ಯನಾರಾಯಣ, ಆರ್.ಶ್ರೀನಿವಾಸ್, ಕೆ.ಸಿ.ದೇವಪ್ಪ, ಕುಮಾರಸ್ವಾಮಿ, ಚನ್ನಬಸಪ್ಪ ಗೌಡ, ನಾಗರಾಜ ಗೌಡ, ಲೋಕನಾಥ್, ಮಧ್ವರಾಜ್ ಇತರರಿದ್ದರು.