ವಿ.ಅಭಿಷೇಕ್, ಅಪರ ಜಿಲ್ಲಾಧಿಕಾರಿ.
- ಪೋಲಿಯೋ ಅಭಿಯಾನದ ಸಿದ್ಧತಾ ಸಭೆ
- ಜು.1ರಂದು ಪಟ್ಟಣ ಪ್ರದೇಶದಲ್ಲಿ ಅಭಿಯಾನ
- ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ಮಾಹಿತಿ
ಶಿವಮೊಗ್ಗ : ದೇಶಾದ್ಯಂತ ಜೂ.28ರಂದು ಪಲ್ಸ್ ಪೋಲಿಯೋ (polio) ಅಭಿಯಾನ ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿ 4,39,013 ಮನೆಗಳಿಂದ ಒಟ್ಟು 1,23,388 ಮಕ್ಕಳನ್ನು ಪೋಲಿಯೋ ಹನಿ ನೀಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ 1,069 ಬೂತ್ (booth) ಗಳು ಹಾಗೂ 3,960 ಕಾರ್ಯಕರ್ತರನ್ನು ಬಳಸಿಕೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ (abhishek) ತಿಳಿಸಿದರು.
ಸೋಮವಾರ ಪೋಲಿಯೋ ಅಭಿಯಾನದ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಬೂತ್‌ಗೆ ಬಾರದ ಮಕ್ಕಳನ್ನು ಗುರುತಿಸಲು ಜೂ.29 ಮತ್ತು 30ರಂದು ಗ್ರಾಮೀಣ ಭಾಗದಲ್ಲಿ ಹಾಗೂ ಜು.1ರಂದು ಪಟ್ಟಣ ಪ್ರದೇಶದಲ್ಲಿ ವಿಶೇಷ ಅಭಿಯಾನ ರೂಪಿಸಲಾಗುವುದು ಎಂದು ಹೇಳಿದರು.
ಜೂ.28ರ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಪೋಲಿಯೋ ಹನಿ ನೀಡಲಾಗುತ್ತದೆ. ಈ ಹಿಂದೆ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ನೀಡಿದ್ದರೂ ಈ ವರ್ಷ ಮತ್ತೆ ಪೋಲಿಯೋ ಹನಿ ಕೊಡಿಸಬೇಕು. ಬೂತ್‌ಗಳಿಗೆ ಮಕ್ಕಳನ್ನು ಕರೆತರಲು ಶಾಲಾ ಮಕ್ಕಳು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಸೇವಾ ಸಂಸ್ಥೆಗಳ ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸಹಕರಿಸಬೇಕೆಂದರು.
ಪೋಲಿಯೋ ಬೂತ್‌ಗಳನ್ನು ತೆರೆಯಲು ಶಾಲಾ ಕೊಠಡಿಗಳು, ಅಂಗನವಾಡಿ ಕಟ್ಟಡಗಳು ಸೇರಿದಂತೆ ಅಗತ್ಯವಿರುವ ಇತರ ಸರ್ಕಾರಿ ಮತ್ತು ಅರೆ ಸರ್ಕಾರಿ ಇಲಾಖೆಗಳ ಕಟ್ಟಡಗಳ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ನಗರ ಹಾಗೂ ಪಟ್ಟಣಗಳಲ್ಲಿ ಆಯುಕ್ತರು, ಮುಖ್ಯಾಧಿಕಾರಿಗಳು ಆಯಾ ತಾಲೂಕಿನ ಆರೋಗ್ಯ ಅಧಿಕಾರಿಯೊಂದಿಗೆ ಸಮನ್ವಯ ಸಾಧಿಸಬೇಕೆಂದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಸುಜಾತಾ, ಡಿಎಚ್‌ಒ ಡಾ.ನಟರಾಜ್, ಡಿಎಸ್‌ಒ ಡಾ.ನಾಗರಾಜ್ ನಾಯ್ಕ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಮುಂತಾದವರಿದ್ದರು.
"
ಕೋಟ್: ಭಾರತವು 2014ರಿಂದಲೇ ಪೋಲಿಯೋ ಮುಕ್ತವಾಗಿದೆ. 2011ರಲ್ಲಿ ಪಶ್ಚಿಮ ಬಂಗಾಳದಲ್ಲಿ ಕಡೆಯ ಪ್ರಕರಣ ಕಂಡುಬಂದಿತ್ತು. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಒಂದೆರಡು ಪ್ರಕರಣಗಳಿದ್ದು ಅಲ್ಲಿಂದ ನಮ್ಮ ದೇಶಕ್ಕೆ ಪೋಲಿಯೋ ವೈರಾಣು ಬರುವ ಸಂಭವವಿರುವ ಕಾರಣದಿಂದ ಅಭಿಯಾನವನ್ನು ನಿರಂತರವಾಗಿ ನಡೆಸಲಾಗುತ್ತಿದೆ.
— ಡಾ.ಮಲ್ಲಪ್ಪ, ಜಿಲ್ಲಾ ಲಸಿಕಾಧಿಕಾರಿ.