ಸರ ಕಿತ್ತು ಪರಾರಿಯಾಗಿದ್ದ ತಾಲೂಕಿನ ಬಿಕ್ಕೋನಹಳ್ಳಿ ಗ್ರಾಮದ ಮಂಜುನಾಥ ನಾಯ್ಕ ಬಂಧಿಸಿದ ಶಿವಮೊಗ್ಗ ಗ್ರಾಮಾಂತರ ಪೊಲೀಸರು.
- ಅಬ್ಬಲಗೆರೆ ಬಳಿ ಕಾರಿನಿಂದ ಇಳಿಯುತ್ತಿದ್ದ ಯುವತಿಯ ಸರ ಕಿತ್ತು ಪರಾರಿ
- ಕೃತ್ಯ ನಡೆದ 2 ಗಂಟೆಯಲ್ಲೇ ಬಂಧಿಸಿದ ಶಿವಮೊಗ್ಗ ಗ್ರಾಮಾಂತರ ಪೊಲೀಸರು
- ತಾಲೂಕಿನ ಬಿಕ್ಕೋನಹಳ್ಳಿ ಗ್ರಾಮದ ಮಂಜುನಾಥ ನಾಯ್ಕ ಬಂಧಿತ ಆರೋಪಿ
ಶಿವಮೊಗ್ಗ: ತಾಲೂಕಿನ ಅಬ್ಬಲಗೆರೆ(Abbalagere) ಬಳಿ ಕಾರಿನಿಂದ ಇಳಿಯುತ್ತಿದ್ದ ಯುವತಿಯ ಕೊರಳಲಿದ್ದ ಬಂಗಾರದ ಸರ ಕಿತ್ತು ಪರಾರಿಯಾಗಿದ್ದ ಯುವಕನನ್ನು ಕೃತ್ಯ ನಡೆದ ಎರಡು ಗಂಟೆಯಲ್ಲೇ ಶಿವಮೊಗ್ಗ ಗ್ರಾಮಾಂತರ ಠಾಣೆ(Shimogga Rural station) ಪೊಲೀಸರು ಬಂಧಿಸಿದ್ದು, ಆತನಿಂದ 6.50 ಲಕ್ಷ ರೂ. ಮೌಲ್ಯದ ಕಾರು ಮತ್ತು ಬಂಗಾರದ ಸರವನ್ನು ಜಪ್ತಿ ಮಾಡಿದ್ದಾರೆ.
ತಾಲೂಕಿನ ಬಿಕ್ಕೋನಹಳ್ಳಿ ಗ್ರಾಮದ ಮಂಜುನಾಥ ನಾಯ್ಕ(24) ಬಂಧಿತ ಆರೋಪಿ. ಶುಕ್ರವಾರ ಸಂಜೆ ಅಬ್ಬಲಗೆರೆಯಿಂದ ಮುಂದೆ ಸ್ವಲ್ಪ ದೂರದಲ್ಲಿ ಯುವತಿಯೊಬ್ಬಳು ಕಾರಿನಿಂದ ಇಳಿಯುತ್ತಿದ್ದಾಗ ಇಕೋ ಸ್ಪೋರ್ಟ್ಸ್(Eco Sports) ಕಾರಿನಲ್ಲಿ ಬಂದ ಇಬ್ಬರು ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.
ಡಿವೈಎಸ್‌ಪಿ(DYSP) ಟಿ.ಸಂಜೀವ್‌ಕುಮಾರ್ ಮಾರ್ಗದರ್ಶನದಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರಾಘವೇಂದ್ರ ಕಾಂಡಿಕೆ, ಪಿಎಸ್‌ಐ(PSI) ನವೀನ್ ಮಠಪತಿ ಮತ್ತು ಸಿಬ್ಬಂದಿಗಳಾದ ಶ್ರೀಕಾಂತ್, ಕಾಶಿನಾಥ, ಕವನ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಬಂಧಿತ ಮಂಜುನಾಥ ನಾಯ್ಕನಿಂದ 5 ಲಕ್ಷ ರೂ. ಮೌಲ್ಯದ ಕಾರು, 1.50 ಲಕ್ಷ ರೂ. ಮೌಲ್ಯದ 10 ಗ್ರಾಂ ಬಂಗಾರದ ಸರ ಜಪ್ತಿ ಮಾಡಿದ್ದು, ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.