ಸೊರಬದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು. ಮಂಜುಳಾ ಹೆಗಡಾಳ್, ಇಒ ಶಶಿಧರ್, ಹನುಮಂತ ನಾಯಕ್, ಎಂ.ಡಿ.ಶೇಖರ್, ಜೈಶೀಲ ಗೌಡ, ಅಣ್ಣಪ್ಪ ಇತರರಿದ್ದರು. 
ಶಿವಮೊಗ್ಗ

ಸೊರಬ ಕ್ಷೇತ್ರ ಅಭಿವೃದ್ಧಿಗೆ ಯೋಜನೆ

ಶಿವಕುಮಾರ ಎಸ್.ಪಿ.
ಸೊರಬ: ಮುಂದಿನ ವರ್ಷಕ್ಕೆ ತಾಲೂಕಿನ ಇಲಾಖಾವಾರು ಸಮಗ್ರ ಅಭಿವೃದ್ಧಿಗೆ 778 ಕೋಟಿ ರೂ. ಮೊತ್ತದ ಕ್ರಿಯಾಯೋಜನೆ ತಯಾರಿಸಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. 
ಪಟ್ಟಣದ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ತಾಲೂಕುವಾರು ಅಭಿವೃದ್ಧಿಗೆ ಮುನ್ನೋಟವಾಗಿ ಅಂದಾಜು ವೆಚ್ಚ ತಯಾರಿಸುವಂತೆ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಅಧಿಕಾರಿಗಳು ಇಲಾಖಾವಾರು ಅಗತ್ಯವಿರುವ ಸೌಲಭ್ಯ ಹಾಗೂ ಕಾಮಗಾರಿಗಳ ಪಟ್ಟಿ ತಯಾರಿಸಿ ಅನುದಾನಕ್ಕೆ ಬೇಡಿಕೆ ಇಡಲಾಗಿದೆ. ಇದರಲ್ಲಿ ಇಲಾಖೆಯ ವಿವಿಧ ಸವಲತ್ತು ಹಾಗೂ ಯೋಜನೆಗಳ ವಿಶೇಷ ಅನುದಾನ ಒಳಗೊಂಡಿರುವುದಿಲ್ಲ ಇದು ಪ್ರತ್ಯಕವಾಗಿರುತ್ತದೆ. ಇದೇ ರೀತಿ ಜಿಲ್ಲೆಯ ಎಲ್ಲ ತಾಲೂಕಿನಿಂದ ಸಮಗ್ರ ಅಭಿವೃದ್ಧಿ ಯೋಜನೆ ತಯಾರಿಸಲಾಗುತ್ತಿದೆ ಎಂದರು.
ಸರ್ಕಾರಿ ಶಾಲೆಗಳ ಉನ್ನತಿಗೆ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಭಾವನೆ ಬೆಳೆಸಿಕೊಂಡಾಗ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಅರ್ಥ ಬರಲಿದೆ. ಪಠ್ಯಪುಸ್ತಕಗಳನ್ನು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಬೇಕು. ಹೆಚ್ಚುವರಿ ಬೇಡಿಕೆ ಸಲ್ಲಿಸುವುದರಿಂದ ಅಧಿಕ ವೆಚ್ಚ ಉಂಟಾಗಲಿದೆ. ಖಾಸಗಿ ಶಾಲೆಗೆ ಸೇರಿದ ಬಡ ಮಕ್ಕಳನ್ನು ಗುರುತಿಸಿ ಸರ್ಕಾರಿ ಶಾಲೆಗೆ ವಾಪಸು ಸೇರಿಸಲು ಇಲಾಖೆ ಅಧಿಕಾರಿಗಳು ಜಾಗ್ರತೆ ವಹಿಸಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಲಿತಾಂಶ ಬರುವಂತೆ ಪ್ರಯತ್ನಿಸಬೇಕು. ಶಾಲಾ ಕಾಲೇಜಿಗೆ ಪಾಲಕರು ಕಡ್ಡಾಯವಾಗಿ ಬರುವಂತೆ ನಿಯಮ ಮಾಡಬೇಕು ಎಂದು ಬಿಇಒ ಪುಷ್ಪಾ ಅವರಿಗೆ ಸೂಚಿಸಿದರು.
ತಾಲೂಕಿನಲಿ ಕಸ್ತೂರಬಾ ಶಾಲೆಗಳನ್ನು ತೆರೆಯುವಂತೆ ಮೇಲಾಧಿಕಾರಿ ಜತೆ ಚರ್ಚಿಸಲಾಗುತ್ತದೆ. ಕಂದಾಯ ಭೂಮಿ ಮತ್ತು ಶಾಲಾ ಕಾಲೇಜುಗಳ ಜಾಗ ಒತ್ತುವರಿಯಾದರೆ ತೆರುವುಗೊಳಿಸಲು ಡಿಸೆಂಬರ್ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿದೆ ಎಂದು ತಿಳಿಸಿದರು.
ನಾಯಿ ಕಡಿತ ಪ್ರಕರಣ 900
ತಾಲೂಕಿನಲ್ಲಿ ಮೂವರು ಗರ್ಭಿಣಿಯರಲ್ಲಿ ರಕ್ತಹೀನತೆ ಕಂಡುಬಂದಿದ್ದು, ಔಷಧೋಪಚಾರ ನೀಡಲಾಗಿದೆ. ನಾಯಿ ಕಡಿದ 900ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ ಎಂದು ವೈದ್ಯಾಧಿಕಾರಿ ಡಾ. ನೂತನ್ ನಾಯಕ್ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ನಾಯಿ ಕಡಿತ ಪ್ರಕರಣಗಳ ಬಗ್ಗೆ ಜಂಟಿಯಾಗಿ ಜಿಲ್ಲಾದ್ಯಂತ ಸಮೀಕ್ಷೆ ನಡೆಸಬೇಕು. ಸಂಪೂರ್ಣ ವರದಿ ತರಿಸಿಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಟರಾಜ್ ಅವರಿಗೆ ಸೂಚಿಸಿದರು.
ತಹಸೀಲ್ದಾರ್ ಮಂಜುಳಾ ಹೆಗಡಾಳ್, ಇಒ ಶಶಿಧರ್, ಸಿಒ ಹನುಮಂತ ನಾಯಕ್, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜೈಶೀಲ ಗೌಡ, ಕೆಡಿಪಿ ಸದಸ್ಯರಾದ ಅಣ್ಣಪ್ಪ, ಸದಾನಂದ ಗೌಡ, ಸುರೇಶ್ ಇತರರಿದ್ದರು.