ಶಿವಮೊಗ್ಗ: ಅನಾರೋಗ್ಯಪೀಡಿತ ರಂಗಭೂಮಿ ಕಲಾವಿದ ಜಾನ್‌ಪಾಲ್ ಸಹಾಯಾರ್ಥ ಶಿವಮೊಗ್ಗದ ವಕೀಲ ರಂಗ ಮಿತ್ರರು ತಂಡದಿಂದ ‘ಸೋರುತಿಹುದು ಸಂಬಂಧ’ ನಾಟಕವನ್ನು ನ.13ರಂದು ಸಂಜೆ 7ಕ್ಕೆ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ವಕೀಲ ಕೆ.ಸಿ.ಬಸವರಾಜ್ ಹೇಳಿದರು.
ಜಾನ್‌ಪಾಲ್ ಅವರು ತಮ್ಮ ಕಲಾ ಬದುಕಿನಲ್ಲಿ ಸುಮಾರು 150 ನಾಟಕಗಳು ಹಾಗೂ 7 ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಶಿವಮೊಗ್ಗದ ಹಲವು ವಕೀಲರ ಕಚೇರಿಯಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ನೆರವಾಗುವ ಉದ್ದೇಶದಿಂದ ವಕೀಲರು ಮತ್ತು ರಂಗಕರ್ಮಿಗಳು ಒಗ್ಗೂಡಿ ನಾಟಕ ಪ್ರದರ್ಶನ ಏರ್ಪಡಿಸಿರುವುದಾಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹಾಂತೇಶ ರಾಮದುರ್ಗ ನಾಟಕ ರಚಿಸಿದ್ದು, ಚಂದ್ರಶೇಖರ ಹಿರೇಗೋಣಿಗೆರೆ ನಿರ್ದೇಶಿಸಿದ್ದಾರೆ. ಕೌಟುಂಬಿಕ ಹಾಗೂ ಸಾಮಾಜಿಕ ಸಂಬಂಧಗಳ ಮಹತ್ವ ಸಾರುವ ಈ ನಾಟಕವು ಮನರಂಜನೆಯೊಂದಿಗೆ ಮಾನವೀಯ ಸಂದೇಶವನ್ನೂ ಒಳಗೊಂಡಿದೆ. ನಾಟಕ ಪ್ರದರ್ಶನಕ್ಕೆ ಹೊಂಗಿರಣ ಶಿವಮೊಗ್ಗ ತಂಡ ಸಹಕಾರ ನೀಡಲಿದೆ. ಪ್ರದರ್ಶನಕ್ಕೂ ಮೊದಲು ಎ.ಎಸ್.ಕೆ. ಚಲುವರಂಗ ಕಲಾವಿದರಿಂದ ರಂಗಗೀತೆಗಳ ಗಾಯನ ನಡೆಯಲಿದೆ ಎಂದರು.
ಕಲಾವಿದರ ಸಂಕಷ್ಟದ ಸಂದರ್ಭದಲ್ಲಿ ಸಮಾಜ ನೆರವಿಗೆ ಬರಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾಟಕಕ್ಕೆ ಪ್ರೋತ್ಸಾಹ ನೀಡುವ ಮೂಲಕ ಕಲಾವಿದನ ಚಿಕಿತ್ಸೆಗೆ ಸಹಕರಿಸಬೇಕೆಂದು ಮನವಿ ಮಾಡಿದರು. ವಕೀಲರಾದ ದೇವೇಂದ್ರಪ್ಪ, ಎಸ್.ಮಂಜುನಾಥ್ ಶೆಟ್ಟಿ, ಜಗದೀಶ್, ಯೋಗೇಶ್ ಮಾನೆ, ನಾಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.