ಶಿವಮೊಗ್ಗದ ಕೆವಿಕೆಯಲ್ಲಿ ಕಾಳುಮೆಣಸಿನ ಕೃಷಿ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಡಾ. ಎಂ.ವಿ.ಧನಂಜಯ ಉದ್ಘಾಟಿಸಿದರು. ಡಾ. ರಾಘವೇಂದ್ರ ಕೆ. ಮೇಸ್ತ, ಡಾ. ಸಿ.ಸುನಿಲ್, ಎಚ್.ಕೆ.ವೀರಣ್ಣ, ಡಾ. ಬಿ.ಸಿ.ಹನುಮಂತ ಸ್ವಾಮಿ ಇದ್ದರು.
- ಹಲವು ಸವಾಲುಗಳು ರೈತರ ಮುಂದಿವೆ
- ಕೃಷಿ-ತೋಟಗಾರಿಕೆ ವಿವಿ ಕುಲಪತಿ ಡಾ. ಧನಂಜಯ ಹೇಳಿಕೆ
- ಕೆವಿಕೆಯಲ್ಲಿ ರೈತರಿಗೆ ವಿಚಾರ ಸಂಕಿರಣ
ಶಿವಮೊಗ್ಗ: ನಮ್ಮ ರಾಜ್ಯದ ಪ್ರಮುಖ ಮಸಾಲೆ ಬೆಳೆಗಳಲ್ಲಿ ಒಂದಾದ ಕಾಳುಮೆಣಸು (pepper) ರೈತರ ಆದಾಯ ಹೆಚ್ಚಳದಲ್ಲಿ ಮಹತ್ವದ ಪಾತ್ರ ಹೊಂದಿದೆ. ಅಡಿಕೆ, ತೆಂಗು ಸೇರಿದಂತೆ ವಿವಿಧ ಬೆಳೆಗಳೊಂದಿಗೆ ಅಂತರ ಬೆಳೆಯಾಗಿ (inter crop) ಯಶಸ್ವಿಯಾಗಿ ಬೆಳೆಯಲಾಗುತ್ತಿದೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ (agriculture) ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿಯ ಕುಲಪತಿ ಡಾ. ಎಂ.ವಿ.ಧನಂಜಯ ತಿಳಿಸಿದರು.
ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಳುಮೆಣಸು ಬೆಳೆಯ ಸಮಗ್ರ ನಿರ್ವಹಣೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಅತಿಯಾದ ಮಳೆ ಅಥವಾ ಕೊರತೆ, ರೋಗ-ಕೀಟಗಳ ಬಾಧೆ, ಮಣ್ಣಿನ ಫಲವತ್ತತೆ ಹಾಗೂ ಪೋಷಕಾಂಶಗಳ ನಿರ್ವಹಣೆ ಸೇರಿ ಹಲವು ಸವಾಲುಗಳು ರೈತರ ಮುಂದಿವೆ ಎಂದರು.
ಸುಧಾರಿತ ಕಾಳುಮೆಣಸು ತಳಿ ಆಯ್ಕೆ, ಗುಣಮಟ್ಟದ ಬಳ್ಳಿಗಳ ಉತ್ಪಾದನೆ, ವೈಜ್ಞಾನಿಕ ಪೋಷಕಾಂಶ, ನೀರು, ರೋಗ, ಕೀಟಗಳು ಹಾಗೂ ಕೊಯ್ಲೋತ್ತರ ನಿರ್ವಹಣೆ ಕುರಿತು ವೈಜ್ಞಾನಿಕ ಮಾಹಿತಿಯನ್ನು ರೈತರಿಗೆ ತಲುಪಿಸುವುದು ಈ ವಿಚಾರ ಸಂಕಿರಣದ ಪ್ರಮುಖ ಉದ್ದೇಶ ಎಂದು ಹೇಳಿದರು.
ಕೆವಿಕೆ ಮುಖ್ಯಸ್ಥ ಡಾ. ಸಿ.ಸುನಿಲ್ ಮಾತನಾಡಿದರು. ವಿವಿಯ ವಿಸ್ತರಣಾ ನಿರ್ದೇಶಕ ಡಾ. ರಾಘವೇಂದ್ರ ಕೆ. ಮೇಸ್ತ, ಡೀನ್ ಎಚ್.ಕೆ.ವೀರಣ್ಣ, ಸಹ ವಿಸ್ತರಣಾ ನಿರ್ದೇಶಕ ಡಾ. ಬಿ.ಸಿ.ಹನುಮಂತಸ್ವಾಮಿ ಉಪಸ್ಥಿತರಿದ್ದರು. ಕಾಳುಮೆಣಸಿನ ಬೆಳೆಯ ಸಮಗ್ರ ಬೆಳೆ ನಿರ್ವಹಣೆ ಕುರಿತು ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ಆರ್.ಗಿರೀಶ್ ತಾಂತ್ರಿಕ ಮಾಹಿತಿ ನೀಡಿದರು. ಶಿವಮೊಗ್ಗ ಸೇರಿ ಅಕ್ಕಪಕ್ಕದ ಐದು ಜಿಲ್ಲೆಗಳ ಸುಮಾರು 100ಕ್ಕೂ ಹೆಚ್ಚು ಕಾಳುಮೆಣಸು ಬೆಳೆಗಾರರು ಭಾಗವಹಿಸಿದ್ದರು.
ವಿವಿಯಿಂದ ಹಲವು ಕಾರ್ಯಕ್ರಮ
ನಮ್ಮ ವಿವಿಯಿಂದ ರೈತ ಸೇವಾ ಕೇಂದ್ರ, ಮಾರ್ಗದರ್ಶನ ಕೇಂದ್ರ, ಸಹ್ಯಾದ್ರಿ ಕೃಷಿ ಒನ್ ಕಾರ್ಯಕ್ರಮದಡಿ ರೈತರಿಗೆ ಸಮಗ್ರ ಮಾಹಿತಿಯ ಜತೆಗೆ ಉತ್ತಮ ತಳಿಗಳ ಆಯ್ಕೆ ಮತ್ತು ಪರಿಕರಗಳ ಲಭ್ಯತೆಯನ್ನು ಕೃಷಿ ಪದವೀಧರರಿಂದ ರೈತರಿಗೆ ನೇರವಾಗಿ ತಲುಪಿಸಲಾಗುವುದು. ಶೀಘ್ರದಲ್ಲಿ ಈ ಯೋಜನೆ ಆರಂಭಿಸಲಾಗುತ್ತದೆ. ವಿವಿ ವ್ಯಾಪ್ತಿಯ ಎಲ್ಲ ಸಂಶೋಧನಾ ಕೇಂದ್ರ ಮತ್ತು ಕೆವಿಕೆಗಳಿಂದ ಪ್ರತಿ ತಿಂಗಳು ಸಸ್ಯ-ಬೀಜ ಸಂತೆಯನ್ನು ಆಯೋಜಿಸಿ ರೈತರಿಗೆ ಒದಗಿಸಲಾಗುವುದು. ತಾಂತ್ರಿಕ ಮಾಹಿತಿ ಒದಗಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಡಾ. ಎಂ.ವಿ.ಧನಂಜಯ ತಿಳಿಸಿದರು.
ಅಡಿಕೆಯಲ್ಲಿ ಉಪ ಬೆಳೆಯಾಗಿ ಕಾಳುಮೆಣಸು ಆದಾಯ ಕೊಡುವ ವಾಣಿಜ್ಯ ಬೆಳೆ. ವೈಜ್ಞಾನಿಕ ತಂತ್ರಜ್ಞಾನ ಅಳವಡಿಸಿಕೊಂಡಾಗ ಮಾತ್ರ ಗುಣಮಟ್ಟದ ಉತ್ಪಾದನೆ, ಉತ್ತಮ ಆದಾಯ ಮತ್ತು ಸುಸ್ಥಿರ ಕಾಳುಮೆಣಸು ಕೃಷಿ ಸಾಧ್ಯ.
— ಡಾ. ರಾಘವೇಂದ್ರ ಕೆ. ಮೇಸ್ತ ವಿಸ್ತರಣಾ ನಿರ್ದೇಶಕ