ಸರ್ಕಾರಿ ದಾಖಲೆಗಳನ್ನು ಪಡೆಯುವ ಸಲುವಾಗಿ ಶಿವಮೊಗ್ಗ ಡಿಸಿ ಕಚೇರಿ ಆವರಣದಲ್ಲಿರುವ ಪಡಸಾಲೆಯಲ್ಲಿ ಸರದಿ ಸಾಲಿನಲ್ಲಿ ನಿಂತಿರುವ ಸಾರ್ವಜನಿಕರು.
- ಸರ್ಕಾರಿ ಕಚೇರಿಗಳಲ್ಲಿ ಸರದಿ ಸಾಲು
- ಎಸ್‌ಐಆರ್, ಗೃಹಜ್ಯೋತಿ ಎಫೆಕ್ಟ್
- ನಗರ ಪ್ರದೇಶದಲ್ಲಿ ಬಾಡಿಗೆದಾರರಿಗೆ ತಲೆಬಿಸಿ
ಏಕಕಾಲದಲ್ಲಿ ಗೃಹಜ್ಯೋತಿ, (gruhajyothi) ಅನ್ನಭಾಗ್ಯ, ಎಸ್‌ಐಆರ್‌ಗಾಗಿ ನೀಡಲು ದಾಖಲೆ (records) ಗಳಿಗಾಗಿ ಜನರ ಹುಡುಕಾಟ (search) ಆರಂಭವಾಗಿದೆ. ಇದರ ಪರಿಣಾಮವಾಗಿ ನಾಡಕಚೇರಿ, ಪಡಸಾಲೆ, ಸ್ಥಳೀಯ ಸಂಸ್ಥೆಗಳ ಬಳಿ ಜನರ ಸರದಿ ಸಾಲು ಕಂಡುಬರುತ್ತಿದೆ.
ಮಳೆಗಾಲ ಆರಂಭವಾಗಿ ಕೃಷಿ ಚಟುವಟಿಕೆಗಳು ಗರಿಗೆದರಬೇಕಾದ ಗ್ರಾಮೀಣ ಭಾಗದಲ್ಲಿ ರೈತರು ಕೃಷಿ ಪರಿಕರಗಳನ್ನು ಸಿದ್ಧಪಡಿಸುವುದನ್ನು ಬಿಟ್ಟು ದಾಖಲೆಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದಕ್ಕಾಗಿ ಹೋಬಳಿ ಇಲ್ಲವೇ ತಾಲೂಕು ಕೇಂದ್ರಗಳಿಗೆ ಅಲೆದಾಡುತ್ತಿದ್ದಾರೆ.
ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆಯುತ್ತಿರುವ ಎಸ್ಸಿ, ಎಸ್ಟಿ ಫಲಾನುಭವಿಗಳು ಜಾತಿ ಪ್ರಮಾಣ ಪತ್ರ ನೀಡಬೇಕು. ಎಸ್‌ಐಆರ್ ನಡೆಯುತ್ತಿರುವುದರಿಂದ ಹೆಸರಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಆಗಿರುವ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು. ಗೃಹಜ್ಯೋತಿ ಯೋಜನೆ ಪರಿಷ್ಕರಣೆ ನಡೆಯುತ್ತಿರುವುದರಿಂದ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಬಾಡಿಗೆದಾರರ ತಲೆಬಿಸಿ ಒಂದೆರಡಲ್ಲ.
ಎಲ್ಲ ಕೆಲಸ ತೊರೆದು ದಾಖಲೆಗಳಿಗಾಗಿ ಸರ್ಕಾರಿ ಕಚೇರಿಗಳಿಗೆ, ಸಾಮಾನ್ಯ ಸೇವಾ ಕೇಂದ್ರಗಳಿಗೆ ಹೋದರೆ ಒಂದೇ ಸಲಕ್ಕೆ ಕೆಲಸವಾಗುತ್ತದೆ ಎಂಬ ಖಾತ್ರಿಯೂ ಇಲ್ಲ. ಪದೇಪದೆ ಕೈಕೊಡುವ ವಿದ್ಯುತ್, ಆನ್‌ಲೈನ್ ಸೇವೆ ಒದಗಿಸುವ ಸರ್ವರ್, ಸರ್ಕಾರಿ ಕಚೇರಿಯಲ್ಲಿ ಸಿಬ್ಬಂದಿ ಎಲ್ಲವೂ ಇದ್ದರೆ ಮಾತ್ರ ಹೋದ ದಾರಿಗೆ ಸುಂಕ. ಇಲ್ಲದೇ ಹೋದರೆ ಬರಿಗೈಲಿ ಮನೆಗೆ ತೆರಳಬೇಕಾದ ಸ್ಥಿತಿ.
ಕಚೇರಿಗಳಲ್ಲಿ ಸಿಬ್ಬಂದಿಯಿಲ್ಲ
ದಾಖಲೆಗಾಗಿ ಸರ್ಕಾರಿ ಕಚೇರಿಗೆ ತೆರಳಿದರೆ ಅಲ್ಲಿ ಸಿಬ್ಬಂದಿಂಗಳೇ ಇರುವುದಿಲ್ಲ. ಅದರಲ್ಲೂ ನಗರ ಹಾಗೂ ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಬಹುತೇಕ ಸಿಬ್ಬಂದಿಯನ್ನು ಎಸ್‌ಐಆರ್ ಕಾರ್ಯಕ್ಕೆ ನಿಯೋಜನೆ ಮಾಡಿರುವುದರಿಂದ ಅವರು ಕಚೇರಿಗಳಲ್ಲಿ ಇರುವುದೇ ವಿರಳ. ಹೀಗಾಗಿ ಅಲ್ಲಿರುವ ಬೆರಳೆಣಿಕೆ ಸಿಬ್ಬಂದಿಗೂ ಕೆಲಸದೊತ್ತಡ ಹೆಚ್ಚುತ್ತಿದೆ. ಸಣ್ಣಪುಟ್ಟ ತಿದ್ದುಪಡಿಗಳಿಗೂ ಮೂರ‌್ನಾಲ್ಕು ಬಾರಿ ಕಚೇರಿ ಅಲೆದಾಟ ತಪ್ಪಿದ್ದಲ್ಲ. ಇದು ಜನರಿಗೆ ಸಮಯದ ಜತೆಗೆ ಹಣದ ವ್ಯಯಕ್ಕೂ ಕಾರಣವಾಗುತ್ತಿದೆ.
ಕಳೆದೊಂದು ತಿಂಗಳಿನಿಂದ ಬಾಂಡ್ ಪೇಪರ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಜಾತಿ ಪ್ರಮಾಣ ಪತ್ರ, ಬಾಡಿಗೆ ಕರಾರು ಪತ್ರ, ಹೆಸರಿನ ಲೋಪಗಳನ್ನು ಸರಿಪಡಿಸಿಕೊಳ್ಳುವುದು ಹೀಗೆ ಬಹುತೇಕ ಕಾರ್ಯಗಳಿಗೆ ಪ್ರಮಾಣಪತ್ರ ನೀಡಲು ಬಾಂಡ್ ಪೇಪರ್‌ನ ಅವಶ್ಯಕತೆಯಿದೆ. ಹೀಗಾಗಿ ವಿವಿಧ ಸೌಹಾರ್ದ ಸಹಕಾರ ಸಂಘಗಳು, ನೋಟರಿಗಳ ಎದುರು ಜನರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆಗೆ ಎನ್ಯುಮರೇಷನ್ ಸಲ್ಲಿಸಲು, ಗೃಹಜ್ಯೋತಿ ಯೋಜನೆಯ ಪರಿಷ್ಕರಣೆಗೆ ಸಂಬಂಧಿಸಿದಂತೆ ದಾಖಲೆ ಸಲ್ಲಿಸಲು ಆನ್‌ಲೈನ್ ವ್ಯವಸ್ಥೆಯಿದೆ. ಆದರೆ ಸರ್ವರ್ ಸಮಸ್ಯೆಗಳಿಂದ ಈ ಜಾಲತಾಣಗಳು ಕಾರ್ಯನಿರ್ವಹಿಸುವುದೇ ಕಡಿಮೆಯಾಗಿದೆ. ಅರ್ಧಂಬರ್ಧ ಕೆಲಸವಾಗುತ್ತಿದ್ದಂತೆಯೇ ಸರ್ವರ್‌ನಲ್ಲಿ ತೊಂದರೆ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಜನರು ಅನಿವಾರ್ಯವಾಗಿ ಪಡಸಾಲೆ, ಸಾಮಾನ್ಯ ಸೇವಾ ಕೇಂದ್ರಗಳಿಗೆ ತೆರಳಿ ತಾಸುಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಗೃಹಜ್ಯೋತಿ ಅರ್ಜಿದಾರರ ಪರಿಷ್ಕರಣೆಯಲ್ಲಿ ತೊಡಗಿರುವ ಮೆಸ್ಕಾಂ ಸಿಬ್ಬಂದಿ ಹಾಗೂ ಎಸ್‌ಐಆರ್‌ಗೆ ನಿಯೋಜನೆಯಾದ ಬಿಎಲ್‌ಒಗಳ ಸ್ಥಿತಿಯೂ ಶೋಚನೀಯವಾಗಿದೆ. ಮಲೆನಾಡು ಭಾಗದ ಅನೇಕ ಕಡೆಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇಲ್ಲದ ಕಾರಣ ಅವರು ಹೈರಾಣಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ದಿಕ್ಕಿಗೊಂದು ಮನೆ ಇರುವ ಕಡೆಗಳಲ್ಲಿ ದಿನಕ್ಕೆ 8-10 ಮನೆಗಳ ಭೇಟಿಯೂ ಕಷ್ಟ ಎನ್ನುವ ಸ್ಥಿತಿಯಿದೆ.
ಗೃಹಜ್ಯೋತಿ ಯೋಜನೆ ಪರಿಷ್ಕರಣೆಗೆ ಮುಂದಾಗಿರುವ ರಾಜ್ಯ ಸರ್ಕಾರ ಮನೆ ಮಾಲೀಕರು ಇಲ್ಲವೇ ಬಾಡಿಗೆದಾರರು ದಾಖಲೆಗಳನ್ನು ಸಲ್ಲಿಸಲು ಜು.15ರವರೆಗೆ ಕಾಲವಕಾಶ ನೀಡಿದೆ. ಮೆಸ್ಕಾಂ ಸಿಬ್ಬಂದಿ ಮನೆ ಭೇಟಿಗೆ ಬಂದಾಗ ಅವರಿಗೆ ಕೆಲ ದಾಖಲೆಗಳನ್ನು ಜನರು ನೀಡಬೇಕಾಗುತ್ತದೆ. ಮನೆ ಕರಾರು ಪತ್ರ ಇದ್ದಲ್ಲಿ ಎಂಬ ಕಾಲಂವೊಂದು ಈ ಅರ್ಜಿಯಲ್ಲಿದೆ. ಇದರರ್ಥ ಮನೆ ಕರಾರು ಪತ್ರ ಕಡ್ಡಾಯವೇನಲ್ಲ. ಕಡಿಮೆ ಬಾಡಿಗೆ ನೀಡುವ ಅನೇಕರು ಯಾವುದೇ ಕರಾರು ಮಾಡಿಕೊಂಡಿರುವುದಿಲ್ಲ. ಬಹುತೇಕ ಕಡೆಗಳಲ್ಲಿ ಮನೆ ಮಾಲೀಕರು ಹಾಗೂ ಬಾಡಿಗೆದಾರರು ಸೌಹಾರ್ದವಾಗಿ ಇರುವುದರಿಂದ ಅಲ್ಲಿ ಕರಾರಿನ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೆ ಮೆಸ್ಕಾಂ ಸಿಬ್ಬಂದಿ ಮನೆ ಬಾಡಿಗೆ ಕರಾರು ಪತ್ರ ಕಡ್ಡಾಯ ಎಂದು ಹೇಳಿ ಜನರಿಗೆ ಹೆಚ್ಚಿನ ಹೊರೆ ಉಂಟು ಮಾಡುತ್ತಿದ್ದಾರೆ. ಪಡಿತರ ಚೀಟಿ, ಆಧಾರ್, ಎಪಿಕ್ ಕಾರ್ಡ್ ಇಷ್ಟಿದ್ದರೆ ಸಾಕಾಗುತ್ತದೆ. ಆದರೆ ಎಲ್ಲಿ ಯೋಜನೆಯ ಪ್ರಯೋಜನ ಸಿಗುವುದಿಲ್ಲವೋ ಎಂಬ ಕಾರಣಕ್ಕೆ ಜನರು ಬಾಡಿಗೆ ಕರಾರು ಪತ್ರಕ್ಕಾಗಿ ಸಮಯ ಹಾಗೂ ಹಣ ಹಾಳು ಮಾಡಿಕೊಳ್ಳುತ್ತಿದ್ದಾರೆ.
ಈಗಿನ ಪರಿಸ್ಥಿತಿಯಲ್ಲಿ ಮನೆಯಲ್ಲಿ ಯಾರಾದರೊಬ್ಬರು ತಿಳಿದವರು ಇರಲೇಬೇಕು. ಅವರ ಬಳಿ ಎಲ್ಲ ದಾಖಲೆಯೂ ಇರಬೇಕು. ಏಕೆಂದರೆ ಯಾವ ಸಮಯದಲ್ಲಿ ಯಾರು ಮನೆಗೆ ಬರುತ್ತಾರೆ ಎಂದು ಹೇಳುವುದೇ ಕಷ್ಟ. ಇದು ದಾಖಲೆಗಳ ತಿಂಗಳು. ಎಸ್‌ಐಆರ್ ಇ-ಫಾರ್ಮ್ ತಂದುಕೊಂಡುವ ಬಿಎಲ್‌ಒಗಳ ಬರುವಿಕೆಗಾಗಿ ಕಾಯಬೇಕು. ಗೃಹಜ್ಯೋತಿ ಕಲ್ಪಿಸುವ ಮೆಸ್ಕಾಂ ಸಿಬ್ಬಂದಿಯನ್ನು ಎದುರು ನೋಡಬೇಕು.