ಲೋಕಕಲ್ಯಾಣಾರ್ಥ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣಕ್ಕೆ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಚಾಲನೆ ನೀಡಿದರು. ಶ್ರೀ ಅಕ್ಷೋಭ್ಯ ರಾಮಪ್ರಿಯತೀರ್ಥ ಶ್ರೀಪಾದರು, ಕೆ.ಎಸ್.ಈಶ್ವರಪ್ಪ, ಜೋಯಿಸ್ ರಾಮಾಚಾರ್, ಕೆ.ಇ.ಕಾಂತೇಶ್, ಸಂದೇಶ್ ಉಪಾಧ್ಯ ಇತರರಿದ್ದರು. 
ಶಿವಮೊಗ್ಗ

ಯಶಸ್ಸಿಗೆ ದೇವರ ಕೃಪೆ ಅವಶ್ಯ ಎಂದ ಪೇಜಾವರ ಶ್ರೀಗಳು I pejavara swamiji

ಪ್ರಮುಖ ಮುಖ್ಯಾಂಶಗಳು

  • ವಿಶ್ವ ಪ್ರಸನ್ನತೀರ್ಥರ ಅಭಿಮತ
  • ವಿಷ್ಣು ಸಹಸ್ರನಾಮ ಪಾರಾಯಣಕ್ಕೆ ಚಾಲನೆ
ಶಿವಮೊಗ್ಗ: ಕುರುಕ್ಷೇತ್ರ ಯುದ್ಧ (war) ಮುಗಿದ ಬಳಿಕ ಪಟ್ಟಾಭಿಷೇಕ ಸ್ವೀಕರಿಸಿ ಧರ್ಮ ಸಂಸ್ಥಾಪನೆಗೆ ಮುಂದಾದ ಧರ್ಮರಾಯನಿಗೆ ಅನೇಕ ತಾತ್ವಿಕ ಹಾಗೂ ಧಾರ್ಮಿಕ ಗೊಂದಲ ಎದುರಾದವು. ಆತ ತನ್ನ ಗೊಂದಲಗಳನ್ನು ಹಿರಿಯರಾದ ಭೀಷ್ಮಾಚಾರ್ಯರ ಬಳಿ ಪರಿಹರಿಸಿಕೊಂಡ. ಹೀಗೆ ಧರ್ಮರಾಯನ ಪ್ರಶ್ನೆಗಳಿಗೆ ಭೀಷ್ಮರು ಉತ್ತರ ರೂಪದಲ್ಲಿ ನೀಡಿದ್ದೇ ವಿಷ್ಣು ಸಹಸ್ರನಾಮ ಎಂದು ಉಡುಪಿ (udupi) ಪೇಜಾವರ (pejavara) ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಹೇಳಿದರು.
ಶ್ರೀಗಂಧ ಸಂಸ್ಥೆಯಿಂದ ವಿಷ್ಣು ಸಹಸ್ರನಾಮ ಗ್ಲೋಬಲ್ ಟ್ರಸ್ಟ್ ಬೆಂಗಳೂರು ಹಾಗೂ ಭಜನಾ ಪರಿಷತ್ ಶಿವಮೊಗ್ಗ ಸಹಯೋಗದಲ್ಲಿ ಕುವೆಂಪು ರಂಗಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ವಿಷ್ಣು ಸಹಸ್ರನಾಮ ಪಾರಾಯಣಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಭೀಷ್ಮರು ಕ್ಷತ್ರಿಯ ಕುಲದಲ್ಲಿ ಹುಟ್ಟಿದರೂ ಆಚಾರ್ಯತ್ವಕ್ಕೆ ಏರಿದವರು. ಹೀಗಾಗಿ ಅವರು ಭೀಷ್ಮಾಚಾರ್ಯ ಎನಿಸಿಕೊಂಡರು. 700 ವರ್ಷ ಜೀವಿಸಿದ್ದ ಅವರು ಜೀವಿತದ ಬಹುಪಾಲು ಅಂದರೆ 525 ವರ್ಷ ಅಧ್ಯಯನ ನಡೆಸಿದ್ದರು. ಪರಶುರಾಮ, ಬೃಹಸ್ಪತಿ ಆಚಾರ್ಯರ ಬಳಿ ಅವರು ವೇದ, ಶಾಸ್ತ್ರ, ಧಾರ್ಮಿಕ ಸಂಹಿತೆ ಅಭ್ಯಾಸ ಮಾಡಿದ್ದರು ಎಂದು ತಿಳಿಸಿದರು.
ಪಟ್ಟಕ್ಕೇರಿದ ಬಳಿಕ ತನ್ನನ್ನು ಕಾಡುತ್ತಿದ್ದ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಧರ್ಮರಾಯ ಮೊದಲು ಶ್ರೀಕೃಷ್ಣನಲ್ಲಿ ಪ್ರಾರ್ಥಿಸಿದ. ಆದರೆ ಶ್ರೀಕೃಷ್ಣ ಆತನನ್ನು ಮರಣಶಯ್ಯೆಯಲ್ಲಿದ್ದ ಭೀಷ್ಮರ ಬಳಿ ಕರೆದೊಯ್ದ. ಅಲ್ಲಿ ಧರ್ಮರಾಯನ ಎಲ್ಲ ಗೊಂದಲಗಳನ್ನು ಭೀಷ್ಮರು ದೂರ ಮಾಡಿದರು ಎಂದು ಹೇಳಿದರು.
ಶ್ರೀಗಂಧ ಸಂಸ್ಥೆ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ವಿಷ್ಣು ಸಹಸ್ರನಾಮ ಗ್ಲೋಬಲ್ ಟ್ರಸ್ಟ್ ಶಿವಮೊಗ್ಗ ಘಟಕದ ಅಧ್ಯಕ್ಷ ಜೋಯಿಸ್ ರಾಮಾಚಾರ್, ಪ್ರಮುಖರಾದ ಶಬರೀಶ್ ಕಣ್ಣನ್, ಕೆ.ಜಿ.ಕುಮಾರಶಾಸ್ತ್ರಿ ಇತರರಿದ್ದರು.

ಭಗವಂತನ ಅನುಗ್ರಹ ಅವಶ್ಯ

ಮಾನವನ ಪ್ರಯತ್ನ ಹಾಗೂ ಭಗವಂತನ ಕೃಪೆ ಒಂದಕ್ಕೊಂದು ಪೂರಕ ಎಂದು ಪೇಜಾವರ ಶ್ರೀಗಳು ಹೇಳಿದರು. ಹೇಗೆ ಹಕ್ಕಿಯೊಂದು ಒಂದೇ ರೆಕ್ಕೆಯಿಂದ ಹಾರಲು ಸಾಧ್ಯವಿಲ್ಲವೋ ಅದೇ ರೀತಿ ಸ್ವಂತ ಪ್ರಯತ್ನ ಇದ್ದರೂ ಮನುಷ್ಯನಿಗೆ ಭಗವಂತನ ಕೃಪೆ ಅವಶ್ಯ. ಭಗವಂತನ ಅನುಗ್ರಹದಿಂದ ಧರ್ಮ ಸಂಸ್ಥಾಪನೆಯಾಗುತ್ತದೆ. ನಿತ್ಯ ಧ್ಯಾನದಲ್ಲಿ ತೊಡಗಿದರೆ ಜಯ, ಕೀರ್ತಿ, ಸಂಪತ್ತು ಎಲ್ಲವೂ ಲಭ್ಯವಾಗುತ್ತದೆ. ಪರಮಾತ್ಮನ ಸಂಪರ್ಕಕ್ಕೆ ಬಂದ ಮಣ್ಣು, ಕಲ್ಲು, ನೀರು ಎಲ್ಲವೂ ಪಾವನವಾಗುತ್ತದೆ. ಅದೇ ರೀತಿ ಮನುಷ್ಯ ಕೂಡ ಭಗವಂತನ ಅನುಗ್ರಹಕ್ಕೆ ಪಾತ್ರವಾದಾಗ ಆತ ಪಾವನನಾಗುತ್ತಾನೆ ಎಂದು ತಿಳಿಸಿದರು.

ನೂರಾರು ಮಂದಿ ಭಾಗಿ

ಲೋಕಕಲ್ಯಾಣಾರ್ಥ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಭಜನಾ ಮಂಡಳಿಗಳ ಸದಸ್ಯೆಯರು ಸೇರಿ ನೂರಾರು ಜನರು ವಿಷ್ಣು ಸಹಸ್ರನಾಮ ಪಠಣದಲ್ಲಿ ತೊಡಗಿಕೊಂಡರು. ರಂಗಮಂದಿರ ಸಂಪೂರ್ಣ ಭರ್ತಿಯಾಗಿತ್ತು. ಭಜನಾ ಪರಿಷತ್ ಅಧ್ಯಕ್ಷ ಸಂದೇಶ್ ಉಪಾಧ್ಯ ನೇತೃತ್ವದಲ್ಲಿ ಏಕ ಕಾಲದಲ್ಲಿ ವ್ಯಾಕರಣಬದ್ಧವಾಗಿ ಸಹಸ್ರನಾಮ ಮೊಳಗಿತು.