ಸಾಗರದಲ್ಲಿ ಮಾರಿಕಾಂಬ ದೇವಿ ದರ್ಶನ ಪಡೆಯಲು ಆಗಮಿಸಿದ್ದ ಸಂಸದ ಬಿ.ವೈ.ರಾಘವೇಂದ್ರ. ಹರತಾಳು ಹಾಲಪ್ಪ, ಭಾರತಿ ಶೆಟ್ಟಿ ಇತರರಿದ್ದರು. 
ಶಿವಮೊಗ್ಗ

ಮಾರಿಕಾಂಬೆ ದರ್ಶನದಿಂದ ನೆಮ್ಮದಿ | Maarikambe fair

ಶಿವಕುಮಾರ ಎಸ್.ಪಿ.
ಸಾಗರ: ಸಾಗರದ ಅಧಿದೇವತೆ ತಾಯಿ ಮಾರಿಕಾಂಬೆ ದರ್ಶನದಿಂದ ಮನಸ್ಸಿಗೆ ನೆಮ್ಮದಿ ದೊರೆತಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆ ಉತ್ಸವದಲ್ಲಿ ಪಾಲ್ಗೊಳ್ಳುವುದು ಸಂತೋಷದ ಸಂಗತಿ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಮಾರಿಕಾಂಬೆ ಗಂಡನಮನೆ ದೇವಸ್ಥಾನದಲ್ಲಿ ದೇವಿ ದರ್ಶನ ಪಡೆದು ಮಾತನಾಡಿದ ಅವರು, ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸುವಲ್ಲಿ ಇಂತಹ ಉತ್ಸವಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಜಾತ್ರೆ ಹಿನ್ನೆಲೆಯಲ್ಲಿ ಅಮ್ಮನವರ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ಅಮ್ಮನವರಿಗೆ ಪ್ರಾರ್ಥಿಸಿ ತಮ್ಮ ಬೇಡಿಕೆ ಈಡೇರಿಸಲು ಹರಕೆ ಕಟ್ಟಿಕೊಳ್ಳುತ್ತಾರೆ. ನಾನೂ ಸಹ ರಾಜ್ಯದಲ್ಲಿ ಉತ್ತಮ ಮಳೆ-ಬೆಳೆ ಆಗಬೇಕು. ಜನರು ಸಮೃದ್ಧವಾಗಿ, ನಿಶ್ಚಿಂತೆಯಿಂದ ಇರಬೇಕು ಎಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದ್ದೇನೆ. ನನ್ನ ಭಾಗ್ಯ ಎನ್ನುವಂತೆ ಅಂಕೆ ಹಾಕುವ ಶಾಸ್ತ್ರದಲ್ಲಿ ನಾನು ಸಹ ಭಾಗವಹಿಸಿದ್ದೇನೆ ಎಂದು ಹೇಳಿದರು.
ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ವಿಶೇಷ ರೈಲಿನ ವ್ಯವಸ್ಥೆ ಬೇಕು ಎಂದು ಕೇಂದ್ರ ಸಚಿವರಿಗೆ ಬೇಡಿಕೆ ಇರಿಸಿದಾಗ ತಕ್ಷಣ ಸ್ಪಂದಿಸಿದ್ದಾರೆ. ವಿಶೇಷ ರೈಲು ಬೆಂಗಳೂರಿನಿಂದ ಸಾಗರಕ್ಕೆ ಸಂಚರಿಸುತ್ತಿದೆ ಎಂದರು.
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ರಾಜ್ಯವು ಸುಭೀಕ್ಷವಾಗಿರಲಿ, ನಮ್ಮ ಕ್ಷೇತ್ರವು ಉತ್ತಮವಾಗಿರಲಿ ಎಂದು ಮಾರಿಕಾಂಬಾ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇನೆ. ಜಾತ್ರೆಯು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಸಾರ್ವಜನಿಕರು ಶ್ರದ್ಧಾಭಕ್ತಿಯಿಂದ ಜಾತ್ರೆಯಲ್ಲಿ ಪಾಲ್ಗೊಂಡು ಅಮ್ಮನವರ ದರ್ಶನ ಪಡೆಯಬೇಕು. ಆರನೇ ದಿನದ ಜಾತ್ರೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.
ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ದೇವಸ್ಥಾನ ಸಮಿತಿಯ ಕೆ.ಎನ್.ನಾಗೇಂದ್ರ, ಬಿಜೆಪಿ ಪ್ರಮುಖರಾದ ಕೆ.ಆರ್.ಗಣೇಶಪ್ರಸಾದ್, ದೇವೇಂದ್ರಪ್ಪ, ಮಲ್ಲಿಕಾರ್ಜುನ ಹಕ್ರೆ, ರತ್ನಾಕರ ಹೊನಗೋಡು, ಕೊಟ್ರಪ್ಪ ನೇದರವಳ್ಳಿ, ಆರ್.ಶ್ರೀನಿವಾಸ್, ಸತೀಶ್, ಸುವರ್ಣ ಟೀಕಪ್ಪ, ಮೈತ್ರಿ ಪಾಟೀಲ್, ಸವಿತಾ ವಾಸು, ಸಂತೋಷ್ ಶೇಟ್ ಇತರರಿದ್ದರು.