ಸೊರಬ ಪಟ್ಟಣದ ಕಾನುಕೇರಿ ಮಠದಲ್ಲಿ ಆಯೋಜಿಸಿದ್ದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ದಾಸೋಹ ಸೇವೆ ಮಾಡಿದ ಭಕ್ತರನ್ನು ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯರು ಸನ್ಮಾನಿಸಿದರು. ಡಾ. ಸೌಭಾಗ್ಯಾ, ಲಕ್ಷ್ಮೀ ಮುರಳೀಧರ, ಮಂಜುನಾಥ್, ರೇಖಾ ಜಗದೀಶ್, ರೂಪಾ ಇತರರಿದ್ದರು.
ಸೊರಬ: ಮನುಷ್ಯನ ಅಂತರಂಗ ಮತ್ತು ಬಹಿರಂಗ ಸ್ವಚ್ಛತೆಗೆ ಶಿವ ಶರಣರ, ಸಂತರ ಚಿಂತನೆ ಮತ್ತು ಮಾರ್ಗದರ್ಶನ ಅಗತ್ಯ ಎಂದು ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಕಾನುಕೇರಿ ಮಠದಲ್ಲಿ ಶ್ರೀ ಸದ್ಗುರು ಸೇವಾ ಟ್ರಸ್ಟ್, ಅಕ್ಕನ ಬಳಗ ಸೇವಾ ಟ್ರಸ್ಟ್ ಹಾಗೂ ಟೌನ್ ವೀರಶೈವ ಸಮಾಜ ಸಮಿತಿಯಿಂದ ಹಮ್ಮಿಕೊಂಡಿದ್ದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ದೇಹದ ಶುಚಿ ಮಾಡಿಕೊಳ್ಳುವುದು ಸುಲಭ ಆದರೆ ಮನದ ಮೈಲಿಗೆ ತೊಳೆಯಲು ಕೂಡಲ ಸಂಗಮನ ಅನುಭಾವ ಬೇಕು. ಶರಣರ, ಸಂತರ, ಮಹಾತ್ಮರ ಉಪದೇಶವನ್ನು ಕೇಳಿದಾಗ ಮನದೊಳಗಿನ ಕಲ್ಮಶವನ್ನು ತೊಳೆಯಬಹುದು. ಶರಣರು ಸಂಸಾರದಲ್ಲಿ ಇದ್ದುಕೊಂಡು ಪಾರಮಾರ್ಥಿಕ ಸಾಧನೆ ಮಾಡಿರುವುದು ಶ್ರೇಷ್ಠವಾದ ಕೆಲಸ. ಅಂತರಂಗ ಮತ್ತು ಬಹಿರಂಗ ಒಂದೇ ಆಗಿರಬೇಕು. ಶ್ರೀಮಂತರು ಸಮಾಜದ ವ್ಯವಸ್ಥೆಗೆ ಸಮನಾಗಿ ಬದುಕುವುದನ್ನು ಕಲಿಯಬೇಕು ಎಂದರು.
ಡಾ. ಸೌಭಾಗ್ಯಾ ಮಾತನಾಡಿ, ದೈಹಿಕ ಮತ್ತು ಮಾನಸಿಕ ಸದೃಢತೆಗೆ ಆಹಾರೋಪಚಾರ ಬಹುಮುಖ್ಯ. ಯೋಗ, ವ್ಯಾಯಾಮ, ಧ್ಯಾನ, ಪ್ರಾಣಾಯಾಮ ಮಾಡುವುದರಿಂದ ಆರೋಗ್ಯದಲ್ಲಿ ಸುಧಾರಣೆ ಹೊಂದಬಹುದು ಎಂದು ಸಲಹೆ ನೀಡಿದರು.
ಸಂಗೀತ ಸುಧಾರತ್ನ ಪ್ರಶಸ್ತಿ ಪುರಸ್ಕೃತೆ ಲಕ್ಷ್ಮೀ ಮುರಳೀಧರ ಮಾತನಾಡಿ, ಸಮಾಜದಲ್ಲಿ ಎಲ್ಲರಿಗೂ ಗುರುಗಳ ಮಾರ್ಗದರ್ಶನ ಅಗತ್ಯ. ಸಮಾಜ ತಿದ್ದುವ ಕೆಲಸವನ್ನು ಗುರುಗಳು ಮಾಡುತ್ತಿದ್ದರು. ಸರ್ವಜ್ಞ ಜ್ಞಾನದ ಭಂಡಾರವಿದ್ದಂತೆ. ಏನೂ ಇಲ್ಲದ ಕಾಲದಲ್ಲಿ ಸಾಧನೆ ಮಾಡಿ ಅ ಸಾಧನೆಯನ್ನು ನಮಗೆ ಬಿಟ್ಟು ಹೋಗಿದ್ದಾರೆ. ಭಕ್ತಿಯಿಂದ ಭಜಸಿದರೆ ಮುಕ್ತಿಪಥ ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಶ್ರೀರಂಗ ಪುರಂದರ ಭಜನಾ ಮಂಡಳಿ ಸದಸ್ಯರು ಭಜನೆ ಮಾಡಿದರು. ಟೌನ್ ವೀರಶೈವ ಸಮಾಜದ ಅಧ್ಯಕ್ಷ ಮಂಜುನಾಥ್, ಅಕ್ಕನ ಬಳಗದ ಅಧ್ಯಕ್ಷೆ ರೇಖಾ ಜಗದೀಶ್, ರೂಪಾ, ಪೂರ್ಣಿಮಾ, ಜಯಮಾಲಾ, ರೇವತಿ, ಸುಧಾ, ಪುಷ್ಪಾ, ಹೇಮಾ, ಸುನೀತಾ, ರೇಖಾ, ನಾಗರಾಜ್ ಜೈನ್, ನಾಗರಾಜ್ ಗುತ್ತಿ, ಈರೇಶ ಗೌಡ, ನಿಜಗುಣ ಚಂದ್ರಶೇಖರ್, ಚಾಮರಾಜ ಇತರರಿದ್ದರು.